ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದಲ್ಲಿ ಪೂಜಿಸಲ್ಪಡುತ್ತಿದ್ದ ಶತಮಾನಗಳಷ್ಟು ಪುರಾತನ ಇತಿಹಾಸ ಹೊಂದಿರುವ ಆರು ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನರಸಿಂಹದೇವರು, ಗಣಪತಿ ಹಾಗೂ ಮಹಿಷಮರ್ದಿನಿ ಸೇರಿದಂತೆ ಆರು ಪುರಾತನ ವಿಗ್ರಹಗಳು ನಾಪತ್ತೆಯಾಗಿರುವ ಕುರಿತು ಮಠದ ಶಿಷ್ಯ ಜಗದೀಶ್ ಐತಾಳ್ ಅವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಬೆಂಗಳೂರು ಪೊಲೀಸರು, ಪುರಾತನ ವಿಗ್ರಹಗಳನ್ನು ಮಾರಾಟಕ್ಕೆ ಪ್ರದರ್ಶಿಸಿದ್ದ ಜಾಲದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ‘ಪ್ರಸಿದ್ಧಿ ಐಡಲ್ಸ್’ ಸಂಸ್ಥೆಯ ಮಾಲೀಕ ನಾಗೇಂದ್ರ ಪ್ರಸಾದ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಂಶಗಳು ಬೆಳಕಿಗೆ ಬಂದಿವೆ.
ಇನ್ನು, ಪ್ರಕರಣದಲ್ಲಿ ಸ್ವಾಮೀಜಿ ವಾಸುದೇವ ಸದಾಶಿವಶ್ರಮ ಸೇರಿದಂತೆ ಇತರರ ವಿರುದ್ಧವೂ ಆರೋಪಗಳು ಕೇಳಿಬಂದಿವೆ. ಈ ನಡುವೆ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.


