ಮಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿರಂತರವಾಗಿ ದಾಳಿ ನಡೆಸುತ್ತಿವೆ ಎಂದು ಆರೋಪಿಸಿರುವ ಬಿಜೆಪಿ, ಈ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಖಂಡಿಸಿ ನವೆಂಬರ್ 6ರಂದು ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಆಯೋಜಿಸಿದೆ.
ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ‘ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ, ಸಂವಿಧಾನ ರಕ್ಷಿಸಿ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು, ಸಂಸದರು ಮತ್ತು ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯು ನವೆಂಬರ್ 6ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧದಿಂದ ಆರಂಭವಾಗಿ ಕದ್ರಿ ಮೈದಾನದವರೆಗೆ ಸಾಗಲಿದೆ. ಬಳಿಕ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


