ಬೆಂಗಳೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಪೊಲೀಸ್ ನಿರ್ಬಂಧ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ.
ಗಮನ ಸೆಳೆಯುವ ಸೂಚನಾ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್ ವೆಲ್, ಚಕ್ರವರ್ತಿ ಸೂಲಿಬೆಲೆ ಮತ್ತು ಪುನೀತ್ ಕೆರೆಹಳ್ಳಿಗೆ ನಿರ್ಬಂಧ ವಿಧಿಸಲಾಗಿದ್ದು, ಸುಮ್ಮನೆ ಊಹೆ ಮಾಡಿ ಪೊಲೀಸರು ನಿರ್ಬಂಧ ವಿಧಿಸುತ್ತಿದ್ದಾರೆ, ಯಾವುದೇ ಹಿಂದೂ ಸಮಾಜೋತ್ಸವಗಳಲ್ಲಿ ಗಲಾಟೆ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರನ್ನು ಕಂಡರೆ ಈ ಸರ್ಕಾರಕ್ಕೆ ಆಗುವುದಿಲ್ಲವೇ ಎಂದು ಸದನದಲ್ಲಿ ಪ್ರಶ್ನೆ ಮಾಡಿದ ಶಾಸಕ ಸುನೀಲ್ ಕುಮಾರ್, ನೋಟೀಸ್ ಕೊಟ್ಟ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್, ಜಿಲ್ಲಾ ಎಸ್ ಪಿ ಮತ್ತು ಡಿಸಿ ಚಿಂತನೆ ಮಾಡಿ ನೋಟೀಸ್ ಕೊಟ್ಟಿರುತ್ತಾರೆ, ಕೋಮು ಪ್ರಚೋದನೆ ಮಾಡುವವರ ವಿರುದ್ಧ ಕ್ರಮ ತಗೆದುಕೊಂಡಿರುತ್ತಾರೆ, ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಎಲ್ಲಾ ಸರ್ಕಾರದಲ್ಲೂ ಇದೇ ಪ್ರಕ್ರಿಯೆ ಇರುತ್ತದೆ ಎಂದು ಹೇಳಿರುವ ಸಚಿವ ಹೆಚ್.ಕೆ. ಪಾಟೀಲ್, ಕೋಮು ಪ್ರಚೋದನೆ ಮಾಡುವವರನ್ನು ಹದ್ದುಬಸ್ತಿನಲ್ಲಿ ಇಡಲು ಈ ಕ್ರಮ ವಹಿಸಿರುತ್ತಾರೆ, ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡುವುದಾಗಿ ಸದನದಲ್ಲಿ ಉತ್ತರ ನೀಡಿದ್ದಾರೆ.


