ಪ್ರವೀಣ್ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಅವರು ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಸಚಿವರು ಘೋಷಿಸಿರುವ ಮೊತ್ತ ಅವರ ವೈಯಕ್ತಿಕ ಕೊಡುಗೆಯಲ್ಲ; ಅದು ನನ್ನ ಹಣ ಎಂದು ಸ್ಟಾರ್ಟಪ್ ಉದ್ಯಮಿ ಪ್ರವೀಣ್ ಮಾವಿನಕಾಡು ಎಂಬುವರು ಪ್ರತಿಕ್ರಿಯಿಸಿದ್ದಾರೆ.
ಅಷ್ಟೇಅಲ್ಲದೆ, ಕರ್ನಾಟಕ ಇನ್ನೋವೇಟಿವ್ ಅಂಡ್ ಟೆಕ್ನಾಲಜಿ ಸೊಸೈಟಿ(Karnataka Innovation and Technology Society)ಯಲ್ಲಿ ಸ್ಟಾರ್ಟಪ್ ಆಯ್ಕೆಯ ವಿಷಯದಲ್ಲಿ ಸಚಿವರಿಗೆ ಸಂದಾಯವಾಗಿರುವ ಹಣವನ್ನೇ ಇದೀಗ ಅವರು ಪ್ರವೀಣ್ ಕುಟುಂಬಕ್ಕೆ ಪರಿಹಾರವಾಗಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅವರ ಆ ಪ್ರತಿಕ್ರಿಯೆಯ ಯಥಾ ರೂಪ ಇಲ್ಲಿದೆ;”ಹತ್ಯೆಯಾಗಿರುವ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ವೈಯುಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆ ಅಂತ ಸಚಿವ ಡಾ. ಅಶ್ವಥನಾರಾಯಣ ಅವರು ಘೋಷಿಸಿದ್ದಾರೆ. ಬಹಳ ಸಂತೋಷದ ವಿಷಯ”.”ಆದರೆ, ಅವರ ಘೋಷಣೆಯಲ್ಲಿ ಒಂದು ಸಣ್ಣ ತಪ್ಪು ನುಸುಳಿದಂತಿದೆ. ಅದೇನೆಂದರೆ ʼವೈಯುಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆʼ ಎಂದು ಅವರು ಹೇಳಿದ್ದಾರೆ. ಆದರೆ ಆ ಹಣ ಅವರ ವೈಯುಕ್ತಿಕ ಹಣ ಅಲ್ಲ. ಅದು ನನ್ನ ಹಣ. ಹೌದು ಅದು ನನ್ನದೇ ಹಣ. ಹಾಗಾಗಿ ಅವರ ಹೇಳಿಕೆ ʼಪ್ರವೀಣ್ ಕುಮಾರ್ ಅವರ 10 ಲಕ್ಷ ನೀಡುತ್ತಿದ್ದೇನೆʼ ಎಂದು ಆಗಬೇಕು” ಎಂದಿದ್ದಾರೆ.


