ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಹಾಮಳೆಗೆ ಜಿಲ್ಲೆಯ ಕಟಪಾಡಿ ಮಟ್ಟುವಿನ ಕೈಮಗ್ಗದ ನೇಕಾರ ಲಕ್ಷ್ಮಣ್ ಶೆಟ್ಟಿಗಾರ್ ಅವರ ಕೈಮಗ್ಗ ಶೆಡ್ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಲಕ್ಷ್ಮಣ ಶೆಟ್ಟಿಗಾರ್ ಅವರ ಸಹಾಯಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದೆ ಬಂದಿದ್ದಾರೆ.
ಉಡುಪಿಯಲ್ಲಿ ಸುರಿದ ಮಹಾಮಳೆ ಸಂದರ್ಭ ಲಕ್ಷ್ಮಣ ಶೆಟ್ಟಿಗಾರ್ ಅವರು ಪತ್ನಿ ಜತೆ ನೆರೆ ನೀರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸುದ್ದಿಯನ್ನು ಗಮನಿಸಿ, ಲಕ್ಷ್ಮಣ್ ಶೆಟ್ಟಿಗಾರ್ ಕುಟುಂಬಕ್ಕೆ ತಕ್ಷಣ ನೆರವು ನೀಡುವಂತೆ ಕೇಂದ್ರ ಸರಕಾರದ ಟೆಕ್ಸ್‌ಟೈಲ್ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ಅವರು ನಿರ್ದೇಶನ ನೀಡಿದ್ದಾರೆ.

ಅದರಂತೆ ಬೆಂಗಳೂರಿನಿಂದ ಶೆಟ್ಟಿಗಾರ್ ಮನೆಗೆ ಆಗಮಿಸಿದ ಸೇವಾ ಕೇಂದ್ರದ ಅಧಿಕಾರಿಗಳು, ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಕೈಮಗ್ಗಕ್ಕೆ ಅನುಕೂಲವಾಗುವಂತೆ ಮನೆ ಸಮೀಪ ಶೆಡ್ ನಿರ್ಮಿಸಲು 1.20ಲಕ್ಷ ರೂ. ಅನುದಾನವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
55 ವರುಷಗಳಿಂದ ಕೈ ಮಗ್ಗವನ್ನೇ ನೆಚ್ಚಿಕೊಂಡಿದ್ದ ಕಟಪ್ಪಾಡಿ ಮಟ್ಟುವಿನ ಲಕ್ಷ್ಮಣ ಶೆಟ್ಟಿಗಾರ್ ಹಾಗೂ ಅವರ ಕುಟುಂಬ ಇತ್ತೀಚೆಗೆ ಉಡುಪಿ ಪ್ರವಾಹಕ್ಕೆ ನಲುಗಿ ಸಂಕಷ್ಟ ಅನುಭವಿಸಿತ್ತು. ಯಕ್ಷಗಾನಕ್ಕೆ ಬಳಸುವ ಸೀರೆಗಳ ನೇಯ್ಗೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲವೇ ಕೆಲ ನೇಕಾರರಲ್ಲಿ ಇವರು ಒಬ್ಬರು. ಒಂದು ಸೀರೆಗೆ ಕೇವಲ 400 ರುಪಾಯಿ ಪಡೆವ ಈ ಕುಟುಂಬದ ಆಧಾರವೇ ಈ ಕೈಮಗ್ಗ. ಆದರೆ ಈಗ ಅದು ಮಳೆಗೆ ಸಂಪೂರ್ಣವಾಗಿ ಒದ್ದೆಯಾಗಿ ಹಾಳಾಗಿತ್ತು.


