
ಕೊಪ್ಪಳ : ಮಹಾಮಾರಿ ಕೊರೋನಾದಿಂದ ಜಗತ್ತು ಕಂಗೆಟ್ಟು ಕೂತಿದೆ. ಆದರೆ ಭಾರತದ ರಾಜಕಾರಣಿಗಳು ಮಾತ್ರ ಕೊರೋನಾ ಆತಂಕದ ನಡುವೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾಸ್ಕ್ ಮೇಲೆಯೇ ಬಿಜೆಪಿ ಸಿಂಬಲ್ ಬಳಸಿದ್ದಾರೆ.
ಕೊರೋನಾ ಸಂಕಷ್ಟದಲ್ಲೂ ಪಕ್ಷದ ಬ್ರಾಂಡ್ ಬಿಲ್ಡ್ ಮಾಡುವ ಕೆಲಸಕ್ಕೆ ಪ್ರಜ್ಞಾವಂತರೆನಿಸಿಕೊಂಡವರು ಕೈ ಹಾಕಿರುವುದು ಇದೀಗ ಟೀಕೆಗೆ ಕಾರಣವಾಗಿದೆ. ಕೊಪ್ಪಳದ ಕಾರಟಗಿಗೆ ಆಗಮಿಸಿದ ವೇಳೆ ನಳಿನ್ ಕುಮಾರ್ ಆವಾತರ ನೋಡಿದವರು ಬೆರಗಾಗಿದ್ದು ಸುಳ್ಳಲ್ಲ.

ಪಶ್ಚಿಮ ಬಂಗಾಳದಲ್ಲೂ ಮಾಸ್ಕ್ ರಾಜಕೀಯ
ಮತ್ತೊಂದೆಡೆ ಪಶ್ಚಿಮ ಬಂಗಾಳದ ರಾಜಕಾರಣಿಗಳು ಮಾಸ್ಕ್ ಹಾಕಿಕೊಂಡೇ ತಮ್ಮ ಪಕ್ಷದ ಕಾರ್ಯಚಟುವಟಿಕೆಯನ್ನು ಸಮರ್ಥವಾಗಿ ಪ್ರಚಾರ ಮಾಡುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್‌ನವರು ಬಿಳಿ ಬಟ್ಟೆಯ ಮೇಲೆ ತಮ್ಮ ರಾಜ್ಯದ ನಕ್ಷೆ ಅಥವಾ ಪಕ್ಷದ ಚಿಹ್ನೆಯನ್ನು ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸುತ್ತಿದ್ದರೆ, ಬಿಜೆಪಿಯವರು ಕೇಸರಿ ಬಟ್ಟೆಯಲ್ಲಿ ಕಮಲ ಚಿಹ್ನೆ ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸಿ ಮಿಂಚುತ್ತಿದ್ದಾರೆ.
ಇವುಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವರೆಗೆ ಎಲ್ಲರೂ ಪಾಲಿಸುತ್ತಿದ್ದಾರೆ.


