ಮಂಗಳೂರು: ಬೈಕ್ ಗೆ ಕಾರು ಡಿಕ್ಕಿ ಹೊಡೆಸಿ ವ್ಯಕ್ತಿಯ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟವೆ ಮಂಗಳೂರಿನಲ್ಲಿ ನಡೆದಿದೆ. ಮಹಮ್ಮದ್ ಶರೀಫ್ (26) ಬಂಧಿತ ಆರೋಪಿ.
ಆರೋಪಿ ಮಹಮ್ಮದ್ ಶರೀಫ್ (26) ಗೆ ಮೋಹನ್ ದಾಸ್ ಶೆಟ್ಟಿ (56) ಅವರೊಂದಿಗೆ ಭೂ ವ್ಯವಹಾರ ಸಂಬಂಧಿಸಿದ ಹಣಕಾಸು ವಿವಾದವಿತ್ತು. ಇದರಿಂದ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು . ಮಾರ್ಚ್ 17 ರಂದು ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಗರದ ಆರ್ಯ ಸಮಾಜ ರಸ್ತೆಯ ಬಳಿ ಇಬ್ಬರು ಮಾತುಕತೆ ನಡೆಸಿದ ವೇಳೆ, ಆರೋಪಿ ಮಹಮ್ಮದ್ ಶರೀಫ್ ಮೊಬೈಲ್ ಕಸಿದುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮೋಹನ್ ದಾಸ್ ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಆರೋಪಿ ಮಹಮ್ಮದ್ ಶರೀಫ್ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ.


