ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ತಂಗುದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಭೀಕರ ಘಟನೆ ನಡೆದಿದೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಸಿರಾಜು ಬಿ.ಎನ್. ಅವರು ನೀಡಿದ ದೂರಿನಂತೆ, ಆರೋಪಿ ಇರ್ಷಾದ್ ಎಂಬಾತನ ವಿರುದ್ಧ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಅಕ್ಟೋಬರ್ 11ರಂದು ರಾತ್ರಿ ಸುಮಾರು 10:00 ಗಂಟೆಯ ವೇಳೆಗೆ ಸಿರಾಜು ಅವರು ಲೇಡಿಗೋಶನ್ ಆಸ್ಪತ್ರೆ ಬಳಿಯ ಬಸ್ ಸ್ಟಾಪ್ನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಇರ್ಷಾದ್, ಮೊಬೈಲ್ ಫೋನ್ ನೀಡುವಂತೆ ಕೇಳಿದ್ದಾನೆ. ಸಿರಾಜು ನಿರಾಕರಿಸಿದಾಗ ಕೆರಳಿದ ಆರೋಪಿ, “ಫೋನ್ ಕೊಡದಿದ್ದರೆ ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿ ತನ್ನ ಬಳಿಯಿದ್ದ ಚೂರಿಯಿಂದ ಕುತ್ತಿಗೆಗೆ ಇರಿಯಲು ಯತ್ನಿಸಿದ್ದಾನೆ.
ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ ಸಿರಾಜು ಅವರ ಮೂಗು ಹಾಗೂ ಬಲಕೈಗೆ ಆಳವಾದ ಗಂಭೀರ ಗಾಯಗಳಾಗಿವೆ. ಸಂತ್ರಸ್ತನ ಆಕ್ರಂದನ ಕೇಳಿ ಸ್ಥಳೀಯರು ಓಡಿ ಬಂದಾಗ ಆರೋಪಿ ಇರ್ಷಾದ್ ಎಂದು ತಿಳಿದುಬಂದಿದೆ. ಗಾಯಾಳುವನ್ನು ತಕ್ಷಣವೇ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಕುರಿತು ಸಂತ್ರಸ್ತ ನೀಡಿದ ದೂರಿನ ಆಧಾರದಲ್ಲಿ ಪಾಂಡೇಶ್ವರ ಠಾಣೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.


