ಮಂಗಳೂರು; ಕ್ರಿಕೆಟ್ ಆಡುತ್ತಿದ್ದಾಗಲೇ ಹೃದಯಾಘಾತವಾಗಿ ಯುವಕ ಸಾವನ್ನಪ್ಪಿರುವ ಘಟನೆ ಬಜ್ಪೆಯ ಮೂಡುಪೆರಾರ ಕಾಯರಾಣೆಯಲ್ಲಿ ನಡೆದಿದೆ. ಪ್ರದೀಪ್ ಪೂಜಾರಿ (31) ಮೃತ ಯುವಕ.
ಭಾನುವಾರ ಸಂಜೆ ಪ್ರದೀಪ್ ಕ್ರಿಕೆಟ್ ಆಡುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕೈಕಂಬ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಯಂಬ್ಯುಲೆನ್ಸ್ ನಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಪ್ರದೀಪ್ ತಾಯಿ, ಸಹೋದರ, ಸಹೋದರಿಯನ್ನು ಆಗಲಿದ್ದಾರೆ. ಪಡುಪೆರಾರ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿದ್ದ ಅವರು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘ ಇದರ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿದ್ದರು. 2012ರಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಸಿಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಕಾಯರಾಣೆ ನವರಂಗ ಫ್ರೆಂಡ್ಸ್‌ನ ಕಾರ್ಯದರ್ಶಿಯಾಗಿದ್ದರು.
ಬಜರಂಗ ದಳದ ಕಾರ್ಯಕರ್ತ, ಜವನೆರ್ ಪೆರಾರ್ ಸದಸ್ಯರಾಗಿದ್ದರು. ಶಾಸಕ ಡಾ| ಭರತ್ ಶೆಟ್ಟಿ ಅವರು ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವನ ಹೇಳಿದರು.