ಬೆಂಗಳೂರು: ಪಕ್ಕದ ಮನೆಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈಜುಕೊಳ ಬಡಾವಣೆ ನಿವಾಸಿ 25 ವರ್ಷದ ಯುವಕ ಪಕ್ಕದ ಮನೆಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಕೆಲವು ತಿಂಗಳಿನಿಂದ ಅಶ್ಲೀಲವಾಗಿ ಸನ್ನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ. ಏಪ್ರಿಲ್ 29 ರಂದು ಸಂಜೆ 5 ಗಂಟೆಗೆ ಯುವತಿ ಮಹಡಿ ಮೇಲೆ ಬಟ್ಟೆ ಒಣಗಿ ಹಾಕಲು ಹೋಗಿದ್ದ ವೇಳೆ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ.
ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ತಾಯಿ ಪ್ರಶ್ನಿಸಿದ್ದು ಆಕೆಯ ತಲೆಗೆ ಡಿಚ್ಚಿ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾನೆ. ಯುವತಿ ಮನೆಗೆ ಬರುತ್ತಿದ್ದ ಅತಿಥಿಗಳ ಜೊತೆಗೂ ಅನುಚಿತವಾಗಿ ವರ್ತಿಸಿ ಕೆಟ್ಟದಾಗಿ ಸನ್ನೆ ಮಾಡುತ್ತಿದ್ದ ಎಂದು ಯುವತಿಯ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.