ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡು, ವಿವಾಹಿತ ಮಹಿಳೆಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯವೆಸಗಿದಲ್ಲದೆ, ಖಾಸಗಿ ವೀಡಿಯೊವನ್ನು ಪತಿ ಹಾಗೂ ಮಳಿಗೆ ಕಳುಹಿಸಿ ಬೆದರಿಕೆ ಹಾಕಿದ್ದ ಕೇರಳ ಮೂಲದ ವ್ಯಕ್ತಿಯನ್ನು ಕಾಸರಗೋಡು ಅಂಬಲತ್ತಾರ ಪೊಲೀಸರು ಎರ್ನಾಕುಲಂನಲ್ಲಿ ಬಂಧಿಸಿದ್ದಾರೆ.
ಕೊಲ್ಲಂ ಕುರುವಿಪುಳ ನಿವಾಸಿ ರಾಹುಲ್ (32) ಬಂಧಿತ ಆರೋಪಿ. ಅಂಬಲತ್ತಾರ ಪೊಲೀಸ್ ಠಾಣೆ ವ್ಯಾಪ್ತಿಯ 40 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಒನ್ ಮನೋರಮಾ ವರದಿ ಮಾಡಿದೆ.
ಘಟನೆಯ ವಿವರ: ಆರೋಪಿಯು ಫೇಸ್ಬುಕ್ನಲ್ಲಿ ‘ಪ್ರೇಮ್’ ಎಂಬ ನಕಲಿ ಹೆಸರನ್ನು ಬಳಸಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದನು. ನಂತರ ವಿವಿಧ ಸ್ಥಳಗಳಿಗೆ ಕರೆದೊಯ್ದು ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಝಿಕ್ಕೋಡ್, ಕಣ್ಣೂರಿನ ಪರಶಿನಿಕಡವು ಹಾಗೂ ಮಹಿಳೆಯ ಮನೆಯಲ್ಲೂ ದೌರ್ಜನ್ಯ ಮುಂದುವರಿದಿತ್ತು.
ಕಿರುಕುಳ ತಾಳಲಾರದೆ ಮಹಿಳೆ ಆತನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ, ಮಹಿಳೆಯ ಖಾಸಗಿ ವೀಡಿಯೊವನ್ನು ವಿದೇಶದಲ್ಲಿರುವ ಆಕೆಯ ಪತಿ ಹಾಗೂ ಮಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ.
ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಮಹಿಳೆ ಅಂಬಲತ್ತಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಎರ್ನಾಕುಲಂನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ರಾಜಪುರಂ ವೃತ್ತ ನಿರೀಕ್ಷಕ ಎ. ಸಂತೋಷ್ ಕುಮಾರ್ ತಿಳಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


