ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾಕುಂಭಮೇಳದ ಲೋಗೋ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಗೋ ಬಿಡುಗಡೆಗೊಳಿಸಿದರು.
ಅಕ್ಟೋಬರ್ 13, 14, 15 ಮತ್ತು16 ರಂದು ಕೆ.ಆರ್. ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ ನಡೆಯಲಿದೆ.
ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಇದಕ್ಕಾಗಿ ಮಹಾಕುಂಭಮೇಳದ ವಿಶೇಷ ಲೋಗೋ ಸಿದ್ದಪಡಿಸಲಾಗಿದೆ.
ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆ ಹಾಗೂ ವಿಶೇಷ ಕಾಳಜಿವಹಿಸಿ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕುಂಭ ಮೇಳದ ಉಸ್ತುವಾರಿ ವಹಿಸಿರುವ ಸಚಿವ ನಾರಾಯಣ ಗೌಡ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದರು. ಕುಂಭ ಮೇಳದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಪಾಲ್ಗೊಳ್ಳುತ್ತಿದ್ದಾರೆ.


