ಬೆಳ್ತಂಗಡಿ; ಉಜಿರೆಯಿಂದ ಗುರಿಪಳ್ಳ ಇಂದಬೆಟ್ಟು ಸಂಪರ್ಕಿಸುವ ಲೋಕೋಪಯೋಗಿ ಇಲಾಖೆ ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಇರುವ ಕಿರು ಸೇತುವೆಯೊಂದು ಶಿಥಿಲಾವಸ್ಥೆಯಲ್ಲಿದ್ದು ಇದೀಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸದರಿ ರಸ್ತೆಯಲ್ಲಿ ಘನ ವಾಹನ ಸಂಚಾರವನ್ನು ಇಲಾಖೆಯೂ ನಿಷೇಧಿಸಿರುತ್ತದೆ.

ಸದರಿ ರಸ್ತೆಯ ಮೂಲಕ ದಿನನಿತ್ಯ 300 ಕ್ಕಿಂತಲೂ ಹೆಚ್ಚಿನ ಶಾಲಾ ಮಕ್ಕಳು ಹಾಗೂ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಇವರೆಲ್ಲರೂ ಸರಕಾರಿ ಬಸ್ಸನ್ನು ಅವಲಂಬಿಸಿದ್ದರು. ಇದೀಗ ಬಸ್ ಇಲ್ಲದೇ ತೊಂದರೆ ಅನುಭವಿಸುತ್ತಿರುವ ವಿಧ್ಯಾರ್ಥಿಗಳ, ಕಾರ್ಮಿಕರ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸುವಂತೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು ಇದಕ್ಕೆ ಪೂರಕವಾಗಿ ಸ್ಪಂದಿಸಿದ ರಕ್ಷಿತ್ ಶಿವರಾಂರವರು ತಕ್ಷಣವೇ ಕ.ರಾ.ರ.ಸಾ.ನಿಗಮದ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರ್ಯಾಯ ರಸ್ತೆಯ ಮೂಲಕ ಗುರಿಪಳ್ಳ ಇಂದಬೆಟ್ಟುವಿಗೆ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು ಇದಕ್ಕೆ ತಕ್ಷಣವೇ ಕಾರ್ಯಪೃವೃತ್ತರಾದ ಜಿಲ್ಲಾಧಿಕಾರಿಗಳು ಇಲಾಖೆಯ ಅಧಿಕಾರಿಗಳನ್ನು ಮಾರ್ಗ ವೀಕ್ಷಣೆಗೆ ಕಳುಹಿಸಿದ್ದರು ಅದರಂತೆ ದಿನಾಂಕ 05/07/2024ನೇ ಶುಕ್ರವಾರದಂದು ಧರ್ಮಸ್ಥಳ ಘಟಕದ ವ್ಯವಸ್ಥಾಪಕರು ಹಾಗೂ ಇಲಾಖೆಯ ಅಧಿಕಾರಿಗಳು ರಸ್ತೆ ವೀಕ್ಷಣೆಗಾಗಿ ಗುರಿಪಳ್ಳಕ್ಕೆ ಬಂದಿದ್ದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಶೋಧರ ಗೌಡ ಕೊಡ್ಡೋಲು, ಪ್ರಮುಖರಾದ ನಾಣ್ಯಪ್ಪ ಪೂಜಾರಿ ಗೋಳಿದೊಟ್ಟು, ರಾಧಾಕೃಷ್ಣ ಶರ್ಮಾ ಗುರಿಪಳ್ಳ, ಯುವ ಕಾಂಗ್ರೆಸ್ ನ ಗುರುರಾಜ್ ಗುರಿಪಳ್ಳ, ಪ್ರಸಾದ್ ಕುಮಾರ್ ಹಾಗೂ ಊರವರು ಉಪಸ್ಥಿತರಿದ್ದರು. ಇದೀಗ ಸರಕಾರಿ ಬಸ್ ಉಜಿರೆ- ಸೋಮಂತಡ್ಕ ಮಾರ್ಗವಾಗಿ ಕಾನರ್ಪ- ಬೊಳ್ಳೂರು ಇಂದಬೆಟ್ಟು ಮೂಲಕ ಗುರಿಪಳ್ಳಕ್ಕೆ ಆಗಮಿಸುತ್ತಿದೆ.

ಊರವರ ಮನವಿಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದ ಸರಕಾರಕ್ಕೆ ಹಾಗೂ ಇಲಾಖೆಗೆ ಮತ್ತು ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಒತ್ತಡ ಹಾಕದ ರಕ್ಷಿತ್ ಶಿವರಾಂರವರಿಗೆ, ಊರಿನ ಪ್ರಮುಖರಿಗೆ ಶಾಲಾ ಮಕ್ಕಳು ಹಾಗೂ ಊರವರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.