ಉಡುಪಿ: ಹಿರಿಯಡ್ಕದಲ್ಲಿ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪರಾರಿಯಾಗಿದ್ದ ಇನೋವಾ ವಾಹನವು ಕಾರ್ಕಳ ಸಮೀಪದ ಇರ್ವತ್ತೂರಿನಲ್ಲಿ ಪತ್ತೆಯಾಗಿದೆ. ಮಂಗಳೂರು ಮೂಲದ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಅವರೊಂದಿಗೆ ಕಿಶನ್ ಹೆಗ್ಡೆ ಹಿರಿಯಡ್ಕ ಸಮೀಪ ಕಾರಿನಿಂದ ಇಳಿಯುವಾಗ ಸುತ್ತಿಗೆ, ಮಾರಕಾಯುಧಗಳಿಂದ 4-5 ಮಂದಿಯ ತಂಡ ಏಕಾಏಕಿಯಾಗಿ ದಾಳಿ ನಡೆಸಿತ್ತು. ಅನಂತರ ಕಿಶನ್ ಹೆಗ್ಡೆ ಮೇಲೆ ಮನೋಜ್ ತಲವಾರಿನಿಂದ ಕಡಿದು ಗಾಯಗೊಳಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್‌ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆ ನಡೆಸಿದೆ.
ಇದು ಕೋಡಿಕೆರೆ ತಂಡದ ಕೃತ್ಯವಾಗಿದ್ದು ರೌಡಿಶೀಟರ್‌ಗಳಾದ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ರಿಡ್ಜ್ ಹಾಗೂ ಇನೋವಾ ಕಾರಿನಲ್ಲಿ ತೆರಳಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿಯ ಬ್ರಹ್ಮಲಿಂಗೇಶ್ವರ ಮೇಲಂಟೆ ದೇವಸ್ಥಾನದ ಬಳಿ ಪತ್ತೆಯಾಗಿತ್ತು. ಇನೋವಾ ಕಾರು ಶುಕ್ರವಾರ ಕಾರ್ಕಳ ಸಮೀಪದ ಇರ್ವತ್ತೂರುವಿನಲ್ಲಿ ಪತ್ತೆಯಾಗಿದೆ. ವಿಷಯದ ತನಿಖೆ ಪ್ರಗತಿಯಲ್ಲಿದೆ.


