
ಮಂಗಳೂರು: ಮನೆಯಲ್ಲಿ ಕಾಮಗಾರಿ ನಡೆಸುವಾಗ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ, ಪ್ರಸ್ತುತ ಬಂದರು ನಿವಾಸಿ ಜಹೀರುದ್ದೀನ್ (24) ಬಂಧಿತ ಆರೋಪಿ.
ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರಲ್ಲಿ ಫಾಲ್ಸ್ ಸೀಲಿಂಗ್ ಹಾಗೂ ಛಾವಣಿ ಬದಲಾವಣೆ ಕೆಲಸಕ್ಕೆ ಬಂದಿದ್ದ ಈತ, ಡ್ರಾವರ್ನಲ್ಲಿದ್ದ 49 ಗ್ರಾಂ ತೂಕದ ಚಿನ್ನಾಭರಣಗಳು (ಕಡಗ, ಚೈನ್, ಉಂಗುರಗಳು) ಹಾಗೂ ಸೊನಾಟಾ ಕಂಪನಿಯ ವಾಚ್ ಸೇರಿದಂತೆ ಒಟ್ಟು ₹6.37 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದನು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಎಸ್ಐ ಅರುಣ್ ಕುಮಾರ್.ಡಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಕೆಲಸಗಾರರನ್ನು ಕೂಲಂಕುಷ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ. ಬಂಧಿತನಿಂದ ಕಳವು ಮಾಡಿದ್ದ ಸಂಪೂರ್ಣ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಕಮಿಷನರೇಟ್ ಶ್ಲಾಘನೆ ವ್ಯಕ್ತಪಡಿಸಿದೆ.


