ಮಂಗಳೂರು : ದಿನಾಂಕ 22.11.2025 ರಂದು ಕೇರಳ ರಾಜ್ಯದ ಕಣ್ಣೂರು ವಲಯದ ಡಿಐಜಿಪಿ ಶ‍್ರೀ ಯತೀಶ್ಚಂದ್ರ ಜಿ. ಹೆಚ್, ಐಪಿಎಸ್ ಮತ್ತು ಶ‍್ರೀ ವಿಜಯ ಭರತ್ ರೆಡ್ಡಿ, ಐಪಿಎಸ್ ಎಸ್.ಪಿ. ಕಾಸರಗೋಡು ಇವರು ಮಂಗಳೂರು ನಗರ ಕಮಿಷನರೇಟ್ ಕಛೇರಿಗೆ ಆಗಮಿಸಿ, ಶ್ರೀ ಸುಧೀರ್ ಕುಮಾರ್ ರೆಡ್ಡಿ ಸಿ ಹೆಚ್, ಐಪಿಎಸ್, ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ನಗರ ಕಮಿಷನರೇಟ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಬಾರ್ಡರ್ ಕ್ರೈಂ ಮೀಟೀಂಗ್ ನಲ್ಲಿ ಭಾಗವಹಿಸಿದರು.
ಈ ಸಮಯ ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳು, ವಾರಂಟ್ ಅಸಾಮಿಗಳು, ಅಂತರ್ ರಾಜ್ಯ ಅಪರಾಧ ಪ್ರಕರಣಗಳು, ಮಾದಕದ್ರವ್ಯ ಸಾಗಾಟ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು . ಅಲ್ಲದೇ ಎರಡೂ ರಾಜ್ಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ವಾರಂಟ್ ಅಸಾಮಿಗಳ ಮಾಹಿತಿ ವಿನಿಮಯ ಮತ್ತು ಪತ್ತೆಯ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲಿ ಪರಸ್ಪರ ಸಹಕಾರ, ಜಂಟಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿ, ವಿಚಾರ ವಿನಿಮಯ ನಡೆಸಲಾಗಿರುತ್ತದೆ


