ಮಂಗಳೂರು; ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನ NIA ಗೆ ವಹಿಸಲು ಕರ್ನಾಟಕದ ಸ್ವಾಮೀಜಿಗಳ ನಿಯೋಗ ಗೃಹ ಸಚಿವ ಅಮಿತ್ ಶಾ ರನ್ನ ಖುದ್ದು ಭೇಟಿಯಾಗಿ ಮನವಿಯನ್ನು ಸಲ್ಲಿಸಿದೆ.
ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿಗ ನೇತೃತ್ವದ ಸನಾತನ ಸಂತ ನಿಯೋಗದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸೇರಿದಂತೆ ವಿವಿಧ ಪೀಠಗಳ 8 ಸ್ವಾಮೀಜಿಗಳು ಇದ್ದರು. ಗೃಹ ಸಚಿವ ಅಮಿತ್ ಶಾ ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿ NIA ಗೆ ವಹಿಸಲು ಮನವಿ ಮಾಡಿದ್ದಾರೆ.ಅಲ್ಲದೇ ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
SIT ತನಿಖೆ ಬಗ್ಗೆ ಆಕ್ಷೇಪವಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹೊರ ಬರಬೇಕು ಎಂದು ಆಗ್ರಹಿಸಿದ್ದಾರೆ. ಖುದ್ದು ಸ್ವಾಮೀಜಿಗಳಿಂದ ಅಮಿತ್ ಶಾ ಧರ್ಮಸ್ಥಳ ಬುರುಡೆ ಪ್ರಕರಣದ ಮಾಹಿತಿ ಪಡೆದಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿ ಪಡೆದಿದ್ದಾರೆ. ಸ್ಥಳ ಪರಿಶೋಧನೆ ಕಾರ್ಯಾಚರಣೆ ಧರ್ಮಸ್ಥಳದ ಬಾಹುಬಲಿ ಬೆಟ್ಟ ತಲುಪಿದ ಬಗ್ಗೆ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಧರ್ಮಸ್ಥಳ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರದ ಅಪಪ್ರಚಾರದ ಬಗ್ಗೆಯೂ ಮಾಹಿತಿ ಕೊಟ್ಟಿದ್ದಾರೆ. ಶಬರಿಮಲೆ, ತಿರುಪತಿ ಬಳಿಕ ಇದೀಗ ಧರ್ಮಸ್ಥಳ ಟಾರ್ಗೆಟ್ ಎಂದು ಗೃಹ ಸಚಿವರ ಮುಂದೆ ಬೇಸರ ಹೊರ ಹಾಕಿದ್ದಾರೆ. ಹಿಂದೂ ಧರ್ಮ ಕ್ಷೇತ್ರಗಳನ್ನ ಸಂಶಯದಿಂದ ನೋಡುವ ರೀತಿ ಷಡ್ಯಂತ್ರ ನಡೆಯುತ್ತಿದೆ. ಯಾರು ದೇವಸ್ಥಾನಗಳಿಗೆ ಹೋಗದಂತೆ ಮಾಡುವ ಹುನ್ನಾರವಿದು ಎಂದು ಮಾಹಿತಿ ಕೊಟ್ಟಿದ್ದಾರೆ. ಈ ವೇಳೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಪ್ರಕರಣವನ್ನ ಅತೀ ಶೀಘ್ರ ಎನ್ ಐ ಎ ತನಿಖೆಗೆ ವಹಿಸಲು ನಿಯೋಗ ಮನವಿ ನೀಡಿದೆ.


