ಕಡಬ; ಆಟೋದಲ್ಲಿ ಸಂಚರಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಚಾರ್ವಕ ಗ್ರಾಮದ ನಿವಾಸಿ ವಿಶ್ವನಾಥ (45) ಮೃತರು.
ವಿಶ್ವನಾಥ ಅವರು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ತಮ್ಮ ಜೊತೆಯಲ್ಲಿದ್ದ ಸ್ಥಳೀಯರಾದ ಸುದೀಪ್ ಹಾಗೂ ಸವಣೂರಿನ ರಿಕ್ಷಾ ಚಾಲಕ ತಾರೇಶ್ ಅವರಲ್ಲಿ ತನಗೆ ಎದೆನೋವು ಬರುತ್ತಿರುವುದಾಗಿ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಸಮಯಪ್ರಜ್ಞೆ ಮೆರೆದು, ತಕ್ಷಣವೇ ವಿಶ್ವನಾಥ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಆಘಾತಕಾರಿ ವಿಷಯವನ್ನು ಜೊತೆಯಲ್ಲಿದ್ದ ಸುದೀಪ್ ಅವರು ಮೃತರ ಅಣ್ಣ ರಮೇಶ್ ಅವರಿಗೆ ರಾತ್ರಿ 8:00 ಗಂಟೆಗೆ ಫೋನ್ ಮೂಲಕ ತಿಳಿಸಿದ್ದಾರೆ. ಮೃತರ ಸಹೋದರ ರಮೇಶ್ (50 ) ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ (UDR) ನಂಬ್ರ: 20/2026 ರಂತೆ, ಕಲಂ: 194 ಬಿ.ಎನ್.ಎಸ್.ಎಸ್. (BNSS) 2023 ರ ಅಡಿಯಲ್ಲಿಮರಣ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


