ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ತನಿಖೆ ನಡೆಯುತ್ತಿರುವಾಗಲೇ ಬೆಳ್ತಂಗಡಿ ಎಸ್ ಐಟಿ ಕಚೇರಿಗೆ ಬಂದು ವ್ಯಕ್ತಿಯೊಬ್ಬರು ದೂರು ಕೊಟ್ಟಿದ್ದಾರೆ.
ಸಾಮಾಜಿಕ ಹೋರಾಟಗಾರ, ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ದೂರು ಕೊಟ್ಟಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಧರ್ಮಸ್ಥಳ ಗ್ರಾಮದಲ್ಲಿ ಹೂತು ಹಾಕಲಾಗಿದೆ. ಈ ಘಟನೆಗೆ ನಾನೇ ಪ್ರತ್ಯಕ್ಷದರ್ಶಿ ಎನ್ನುವ ಗಂಭೀರ ಆರೋಪವನ್ನು ಜಯಂತ್ ಅವರು ಮಾಧ್ಯಮದ ಮುಂದೆ ಮಾಡಿದ್ದಾರೆ.
ಬಾಲಕಿಯ ಶವವನ್ನು ಹೂತಿರುವ ಜಾಗ ನನಗೆ ಈಗಲೂ ನಿಖರವಾಗಿ ಗೊತ್ತಿದೆ. ನಾನು ಎಸ್‌ಐಟಿ ಅಧಿಕಾರಿಗಳಿಗೆ ಆ ಸ್ಥಳ ತೋರಿಸಲು ಸಿದ್ಧನಿದ್ದೇನೆ. ಅದು ಕೊಲೆಯೋ ಅಥವಾ ಬೇರೆ ಏನೋ ಅದು ನನಗೆ ತಿಳಿದಿಲ್ಲ. ಶವ ಸ್ವಲ್ಪ ಕೊಳೆತ ಸ್ಥಿತಿಯಲ್ಲಿತ್ತು ಎಂದು ಅವರು ಹೇಳಿದ್ದಾರೆ.
ನನ್ನ ಕುಟುಂಬದ ಸದಸ್ಯೆಯಾದ ಪದ್ಮಲತಾ ಎಂಬುವವರ ಕೊಲೆಯಾದಾಗ ನಮಗೆ ನ್ಯಾಯ ದೊರೆಯಲಿಲ್ಲ. ಹಾಗಾಗಿ ವ್ಯವಸ್ಥೆ ಮೇಲೆ ನಂಬಿಕೆ ಇರಲಿಲ್ಲ. ಇದೀಗ ಎಸ್‌ಐಟಿ ರಚನೆಯಾಗಿದ್ದು, ತನಿಖೆಯ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ನಾನು ಎಲ್ಲಾ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ದೂರು ನೀಡಲು ಬಂದಿದ್ದೇನೆ ಎಂದು ಜಯಂತ್ ಹೇಳಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಗೆ ಜಯನ್ ಅವರು ತಮ್ಮ ದೂರನ್ನು ನೀಡಿದ್ದು, ಸೋಮವಾರ ಬಂದು ವಿವರವಾದ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.


