ಬೆಂಗಳೂರು: ಖಾಸಗಿ ವಾಹಿನಿಯ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್’ ದೊಡ್ಮನೆ ಎಂದೇ ಪ್ರಸಿದ್ಧಿಯಾಗಿದ್ದು, ಇದೀಗ ದೊಡ್ಮೆನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಸ್ಪರ್ಧಿಗಳು ದಿನಕಳೆದಂತೆ ಹೊಡೆದಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಇದೇ ಕಾರಣದಿಂದ ಇಬ್ಬರು ಸ್ಪರ್ಧಿಗಳನ್ನು ದೊಡ್ಮನೆಯಿಂದ ಹೊರಗಡೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಅ.15 ಮಂಗಳವಾರದ ಎಪಿಸೋಡ್‌ನಲ್ಲಿ ಜಗದೀಶ್ ಅವರ ಮೇಲೆ ಮನೆ ದೊಡ್ಮನೆಯವರು ಮುಗಿಬಿದ್ದಿದ್ದರು. ಉಗ್ರಂ ಮಂಜು, ರಂಜಿತ್, ಚೈತ್ರಾ ಅವರು ಜಗದೀಶ್ ಅವರ ವರ್ತನೆಗೆ ಬೇಸತ್ತು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು.
ಜಗದೀಶ್ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡ್ತಾರೆ. ನಾನು ಬಗ್ಗಿದರೆ ಹಿಂದಗಡೆ ನೋಡಿ ಕಮೆಂಟ್ ಮಾಡ್ತಾರೆ. ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ನಾನಿಲ್ಲಿ ಬಂದಿಲ್ಲ. ಈಗ ಹೋಗ್ತೇನೆ ನಾನು, ನನಗೆ ಗತಿಯಿಲ್ಲದೆ ಇಲ್ಲಿಗೆ ಬಂದಿಲ್ಲ. ನನಗೆ ಯಾರೋ ಹೇಳ್ತಾನೆ ಮೆಂಟಲ್ ನನ್ಮಗ. ನಾನಿಲ್ಲಿ ಗತಿಯಿಲ್ಲದೆ ಬಂದಿಲ್ಲ. ನನಗೂ ನಾಲ್ಕು ಜನಕ್ಕೆ ಊಟ ಹಾಕೋ ಯೋಗ್ಯತೆ ಇದೆ. ಬಾಗಿಲು ಓಪನ್ ಮಾಡಿ ಈಗಲೇ ಹೊರಗಡೆ ಹೋಗ್ತೇನೆ. ನನ್ನ ಲಗೇಜ್ ಇಲ್ಲೇ ಇರಲಿ ಎಂದು ಜಗದೀಶ್ ಅವರು ತನ್ನ ಬಗ್ಗೆ ಆಡಿಕೊಳ್ಳುವ ಸಹ ಸ್ಪರ್ಧಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಅವರು ಕ್ಯಾಮರ ಮುಂದೆ ಕೆಟ್ಟದಾಗಿ ಮಾತನಾಡಿ, ತಮ್ಮ ಬಟ್ಟೆಯನ್ನು ಪ್ಯಾಕ್ ಮಾಡುತ್ತಿದ್ದರು.
ಇನ್ನು ಮಂಜು ಅವರು ಜಗದೀಶ್ ಅವರ ನಡವಳಿಕೆಯ ಬಗ್ಗೆ, ತಿನ್ನೋ ಊಟಕ್ಕೆ ಗೌರವ ಕೊಡಬೇಕು. ಇಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡೋದಲ್ಲ. ಹಲ್ಕಾ ಮಾತನಾಡೋದಲ್ಲ. ಹೋಗ್ತೇನೆ ಹೋಗ್ತೇನೆ ಅಂಥ ಹೇಳೋದಲ್ಲ. ಶೋ ಬಗ್ಗೆ ಇಲ್ಲಸಲ್ಲದ್ದು ಹೇಳೋದಲ್ಲ ಎಂದು ಮಂಜು ಇಲ್ಲಿ ಮುಖಾಮುಖಿಯಾಗಿ ಜಗದೀಶ್ ಗೆ ಹೇಳಿದ್ದಾರೆ.
ಬಿಗ್ ಬಾಸ್ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಲ್ಲರನ್ನು ಕೂರಿಸಿ ಸಮಾಧಾನ ಮಾಡಲು ಯತ್ನಿಸಿದ್ದರು. ಆದರೆ ಮತ್ತೆ ಜಗದೀಶ್ – ರಂಜಿತ್ ನಡುವೆ ವಾಗ್ವಾದ ಶುರುವಾಗಿದ್ದು, ಇಬ್ಬರು ಹೊಡೆದಾಡಿಕೊಳ್ಳುವವರೆಗೂ ಇದು ಹೋಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ದೊಡ್ಮನೆಯಿಂದ ಜಗದೀಶ್ ಹಾಗೂ ರಂಜಿತ್ ಅವರನ್ನು ಹೊರ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.


