ತುಮಕೂರು: ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರ್ ಶೋರೂಂ ಪ್ರಕರಣದ ಮುಂದುವರಿದ ಭಾಗ ಮತ್ತೆ ಸುದ್ದಿಯಾಗಿದೆ. ತುಮಕೂರಿನ ಮಹೀಂದ್ರಾ ಶೋ ರೂಂನಲ್ಲಿ ಅಪಮಾನ ಎದುರಿಸಿದ್ದ ರೈತ ಕೆಂಪೇಗೌಡನ ಮನೆಗೇ ಕಂಪನಿಯಿಂದ ವಾಹನ ಡೆಲಿವರಿ ಮಾಡಲಾಗಿದೆ.
ನಿನ್ನೆಯಷ್ಟೇ ರೈತನ ಮನೆಗೆ ವಾಹನ ಡೆಲಿವರಿ ಬಂದಿದೆ. ಈ ಬಗ್ಗೆ ಸ್ವತಃ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಕೂಡ ಟ್ವೀಟ್ ಮಾಡಿದ್ದು, ನಮ್ಮ ಮಹೀಂದ್ರಾ ಕುಟುಂಬಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡ ಮಹೀಂದ್ರಾ ಗೂಡ್ಸ್ ವಾಹನ ಖರೀದಿ ಮಾಡಲು ತೆರಳಿದ್ದಾಗ ಅವಮಾನ ಮಾಡಿದ ಘಟನೆ ನಡೆದಿತ್ತು. ಈ ವೇಳೆ ಗ್ರಾಹಕ ಧರಿಸಿದ್ದ ಬಟ್ಟೆ ಕಂಡು ಶೋ ರೂಮ್ ಸಿಬ್ಬಂದಿ 10 ರೂಪಾಯಿ ಕೊಡುವ ಯೋಗ್ಯತೆ ಇಲ್ಲ. ವಾಹನ ತೆಗೆದುಕೊಳ್ಳಲು ಬಂದಿದೆಯಾ ಎಂದು ತನಗೆ ಹೀಯಾಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಅಪಮಾನಗೊಂಡ ಕೆಂಪೇಗೌಡ, ಬಳಿಕ ಒಂದು ಗಂಟೆ ಅವಧಿಯಲ್ಲಿ ಬರೋಬ್ಬರಿ 10 ಲಕ್ಷ ರೂ. ಹೊಂದಿಸಿ ವಾಹನ ಡೆಲಿವರಿ ಕೊಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು.
ಇದರ ನಡುವೆ ಅವಮಾನಗೊಂಡ ಕೆಂಪೇಗೌಡ ಪೊಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದ. ಕೊನೆಗೆ ಪೊಲೀಸರು ಶೋ ರೂಮ್ ಸಿಬ್ಬಂದಿ ಹಾಗೂ ಅಲ್ಲಿನ ಅಧಿಕಾರಿಗಳಿಂದ ಕ್ಷಮೆಯಾಚನೆ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿದ್ದರು.
ಇದೀಗ ರೈತನಿಗೆ ಶೋ ರೂಂ ಸಿಬ್ಬಂದಿ ವಾಹನ ಡೆಲಿವರಿ ಕೊಟ್ಟಿದ್ದಾರೆ. ಬೊಲೆರೋ ಪಿಕಪ್ ವಾಹನ ಖರೀದಿಸಿರುವ ಬಗ್ಗೆ ರೈತ ಕೆಂಪೇಗೌಡ ಸಂತಸ ವ್ಯಕ್ತಪಡಿಸಿದ್ದು, ಶೋಂ ರೂಂ ಸಿಬ್ಬಂದಿ ಮನೆಗೆ ಬಂದು ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಯಾರಿಗೂ ಕೂಡ ಈ ರೀತಿ ಆಗಬಾರದು ಎಂಬ ಉದ್ದೇಶ ನನ್ನದಾಗಿತ್ತು ಎಂದಿದ್ದಾರೆ.
ಸಂತಸದಿಂದಲೇ ಮನೆಗೆ ಪಿಕಪ್ ವಾಹನ ತಂದಿದ್ದೇನೆ. ಅವರೂ ಕೂಡ ಸಂತಸದಿಂದಲೇ ಡೆಲಿವರಿ ಕೊಟ್ಟಿದ್ದಾರೆ. 9.40 ಲಕ್ಷ ರೂ. ನೀಡಿ ವಾಹನ ತಂದಿದ್ದೇನೆ. ಅವರೂ ಯಾವುದೇ ರೀತಿಯ ರಿಯಾಯಿತಿ ನೀಡಿಲ್ಲ, ನಾನು ಕೂಡ ಬಯಸಿರಲಿಲ್ಲ. ಮನೆ ಬಳಿಯೇ ಕಂಪನಿಯ ಅಧಿಕಾರಿಗಳೇ ಬಂದಿದ್ದರು ಎಂದು ತಿಳಿಸಿದ್ದಾರೆ.


