Wednesday, April 16, 2025
Homeಚಿಕ್ಕಮಗಳೂರುಇಂದಿನಿಂದಲೇ ಪಶ್ಚಿಮ ಘಟ್ಟದ ಅಕ್ರಮ ರೆಸಾರ್ಟ್‌, ಹೋಮ್‌ಸ್ಟೇ ತೆರವು ಕಾರ್ಯ

ಇಂದಿನಿಂದಲೇ ಪಶ್ಚಿಮ ಘಟ್ಟದ ಅಕ್ರಮ ರೆಸಾರ್ಟ್‌, ಹೋಮ್‌ಸ್ಟೇ ತೆರವು ಕಾರ್ಯ

spot_img
- Advertisement -
- Advertisement -

ಬೆಂಗಳೂರು: ಇಂದಿನಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿಪಶ್ಚಿಮ ಘಟ್ಟವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ರೆಸಾರ್ಟ್‌, ಹೋಮ್‌ಸ್ಟೇ, ಹೋಟೆಲ್‌ ಸೇರಿದಂತೆ ವಾಣಿಜ್ಯ ಸಂಸ್ಥಾಪನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶುರುವಾಗಲಿದೆ. 

ಇನ್ನು ಈ ಕಾರ್ಯಚರಣೆಯನ್ನು ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆಗಿರುವ ಒತ್ತುವರಿಗಳನ್ನು ತೆರವುಗೊಳಿಸಲು ಸರಕಾರವು ಆದೇಶಿಸಿದ್ದು,  ಈ ಉದ್ದೇಶಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ. ಸೋಮವಾರದಿಂದಲೇ ಮೊದಲಿಗೆ ಅಕ್ರಮ ರೆಸಾರ್ಟ್‌, ಹೋಂ ಸ್ಟೇ ತೆರವಿಗೆ ಸೂಚಿಸಲಾಗಿದೆ.

ಘಟ್ಟ ಪ್ರದೇಶಗಳ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಮಾಡಲು ಕಾರ್ಯಪಡೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಈ ಕುರಿತಂತೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ‘ಮೊದಲು ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಅಕ್ರಮ ರೆಸಾರ್ಟ್‌, ಹೋಂ ಸ್ಟೇಗಳನ್ನು ತೆರವುಗೊಳಿಸಲಾಗುವುದು. ನಂತರದಲ್ಲಿ ತೋಟ, ಇನ್ನಿತರ ಕಟ್ಟಡ ತೆರವು ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಎಸಿಎಫ್‌, ಡಿಸಿಎಫ್‌, ಸಿಎಫ್‌, ಸಿಸಿಎಫ್‌, ಎಪಿಸಿಸಿಎಫ್‌ಗಳಿಗೂ ಅರಣ್ಯ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಿ 64ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದೆ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಪಶ್ಚಿಮಘಟ್ಟವನ್ನು ಒತ್ತುವರಿ ಮಾಡಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಅವಕಾಶ ನೀಡುವುದಿಲ್ಲ. ಇಂಥ ಚಟುವಟಿಕೆಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ,’ ಎಂದು ಹೇಳಿದ್ದಾರೆ.

90 ಡಿಗ್ರಿ ನೇರಕ್ಕೆ ಗುಡ್ಡ ಕಡಿದಿರುವುದು ಶಿರೂರು ಮತ್ತು ಶಿರಾಡಿಯಲ್ಲಿ ಕುಸಿತಕ್ಕೆ ಕಾರಣವಾಗಿದ್ದು, ಇಂತಹ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರುಗಳಿಗೂ ನೋಟಿಸ್‌ ಜಾರಿಗೊಳಿಸಲಾಗುವುದು. ಪಶ್ಚಿಮ ಘಟ್ಟದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ, ವಿಸ್ತರಣೆ ಕಾಮಗಾರಿ ಸಂಬಂಧದಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!