Tuesday, May 21, 2024
Homeತಾಜಾ ಸುದ್ದಿಮಂಗಳೂರು: ನಿವೃತ್ತ ಎಸ್‌ಪಿ ಜಯಂತ್‌ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ: ಜಾಮೀನು ರಹಿತ ವಾರಂಟ್...

ಮಂಗಳೂರು: ನಿವೃತ್ತ ಎಸ್‌ಪಿ ಜಯಂತ್‌ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ: ಜಾಮೀನು ರಹಿತ ವಾರಂಟ್ ನೀಡಿದ್ದ ಮಂಗಳೂರು ಕೋರ್ಟ್

spot_img
- Advertisement -
- Advertisement -

ಮಂಗಳೂರು, ಜುಲೈ 8: ಹಳೆಯ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಎಸ್‌ಪಿ ಜಯಂತ್‌ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ವಾರಂಟ್‌ಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ಅಂದಿನ ಇನ್‌ಸ್ಪೆಕ್ಟರ್‌ ಜಯಂತ್ ಶೆಟ್ಟಿ ಮತ್ತು ಎಸ್‌ಐ ಶಿವಪ್ರಕಾಶ್ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕಬೀರ್ ಉಳ್ಳಾಲ್ ಎಂಬುವರು ವಕೀಲರಾದ ಖಾಝಿ ಮುಖಾಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ವಿಚಾರಾಣಾಧೀನ ನ್ಯಾಯಾಲಯ, ಜಯಂತ್ ಶೆಟ್ಟಿ ಹಾಗು ಶಿವಪ್ರಕಾಶ್‌ಗೆ ನೋಟಿಸ್ ಜಾರಿಗೊಳಿಸಿತ್ತು. ನ್ಯಾಯಾಲಯದ ಆದೇಶ ವಿರುದ್ಧ ಇಬ್ಬರು ಪೊಲೀಸ್ ಅಧಿಕಾರಗಳು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಮಾಡಿತ್ತು.

ಈ ಬಗ್ಗೆ ಕಬೀರ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಪ್ರಕರಣದಲ್ಲಿ ಮರು ತನಿಖೆ ನಡೆಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ಹೈಕೋರ್ಟ್ ಪ್ರಕರಣದಲ್ಲಿ ಅಧೀನ ನ್ಯಾಯಾಲಯಕ್ಕೆ ಮರು ತನಿಖೆ ನಡೆಸುವಂತೆ ಆದೇಶಿಸಿದನ್ವಯ ಮಂಗಳೂರಿನ ಸೀನಿಯರ್ ಕೋರ್ಟ್, ಮಾಜಿ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿತ್ತು. ಆ ಪ್ರಕಾರ ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಜಯಂತ್‌ ಶೆಟ್ಟಿಗೆ ಯಾವುದೇ ನೋಟಿಸ್‌ ಸಿಕ್ಕಿರಲಿಲ್ಲ. ಎರಡು ಬಾರಿ ಸಮನ್ಸ್ ನೀಡಿದ್ದರೂ, ಜಯಂತ್‌ ಶೆಟ್ಟಿ ಊರಲ್ಲಿ ಇಲ್ಲದೇ ಇದ್ದುದರಿಂದ ನೋಟಿಸ್‌ ಜಾರಿಯಾಗಿರಲಿಲ್ಲ.

ಈ ಮಧ್ಯೆ ನ್ಯಾಯಾಲಯದಿಂದ ಏಕಾಏಕಿ ಜೂ.20ರಂದು ಜಯಂತ್ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರ ಮೂಲಕ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಮಾಡಲಾಗಿತ್ತು. ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಆಶ್ಚರ್ಯಗೊಂಡ ಜಯಂತ್ ಶೆಟ್ಟಿ ತಮ್ಮ ವಕೀಲರ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ನನಗೆ ಯಾವುದೇ ನೋಟಿಸ್‌ ಜಾರಿಯಾಗಿಲ್ಲ. ಅಲ್ಲದೆ, ಸರ್ಕಾರಿ ಕರ್ತವ್ಯದಲ್ಲಿದ್ದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೆಕ್ಷನ್ 197 ಸಿಆರ್‌ಪಿಸಿ ಹಾಗು 170 ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯಲಾಗಿಲ್ಲ. ಒಂದು ಬಾರಿ ಕೂಲಂಕಷ ವಿಚಾರಣೆ ನಡೆಸಿ, ರದ್ದುಪಡಿಸಿರುವ ಪ್ರಕರಣದಲ್ಲಿ ಮತ್ತೆ ಮರು ತನಿಖೆ ನಡೆಸುವ ಅಗತ್ಯ ಇರುವುದಿಲ್ಲ. ಆದ್ದರಿಂದ ಒಟ್ಟು ಪ್ರಕರಣವನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಇಡೀ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಜಯಂತ್‌ ಶೆಟ್ಟಿ ಪರ ವಕೀಲರಾದ ಪದ್ಮರಾಜ್ ಆರ್. ಮಾಹಿತಿ ನೀಡಿದ್ದಾರೆ.

ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಜಯಂತ್‌ ಶೆಟ್ಟಿ ವಿರುದ್ಧ ಮಂಗಳೂರಿನ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದು ಕುತೂಹಲ ಕೆರಳಿಸಿತ್ತು.

- Advertisement -
spot_img

Latest News

error: Content is protected !!