ಮಂಗಳೂರು: ಬಾಲಕನ ಎದೆಯೊಳಗೆ ಹೊಕ್ಕಿದ್ದ ತೆಂಗಿನ ಗರಿಯ ದಂಡು ಮತ್ತು ಸರವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೆನ್ಲಾಕ್ ಆಸ್ಪತ್ರೆಯ ವೈದ್ಯರನ್ನು ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ ಕಮಲ್ ಹುಸೇನ್ ಚೇತರಿಸಿಕೊಳ್ಳುತ್ತಿದ್ದು, ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ಕಾರ್ಯ ಅಭಿನಂದನಾರ್ಹ ಎಂದು ಹೇಳಿದ್ದಾರೆ.
ಅಲ್ಲದೇ, ಸಾರ್ವಜನಿಕರ ಸೇವೆಗೆ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಅನುಕೂಲಕರವಾಗಿಸಲು ಮತ್ತು ಅತ್ಯುತ್ತಮ ಸೇವೆಗಳು ದೊರೆಯುವಂತೆ ಮೇಲ್ದರ್ಜೆಗೆ ಏರಿಸುವಲ್ಲಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದೂ ದಿನೇಶ್ ಗುಂಡೂರಾವ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಅಸ್ಸಾಂ ಮೂಲದ ಹನ್ನೆರಡು ವರ್ಷದ ಬಾಲಕ ಕಮಲ್ ಹುಸೇನ್ ಮಡಿಕೇರಿಯಲ್ಲಿ ಕಾಫಿ ತೋಟದಲ್ಲಿ ಪೋಷಕರೊಂದಿಗೆ ಇದ್ದ ವೇಳೆ ಮೈ ಮೇಲೆ ತೆಂಗಿನ ಗರಿಯ ದಂಡು ಬಿದ್ದು, ಕುತ್ತಿಗೆಯಲ್ಲಿದ್ದ ಸರದ ಸಮೇತ ದೇಹದ ಒಳಗೆ ಸೇರಿತ್ತು.
ಮಡಿಕೇರಿಯಲ್ಲಿ ಚಿಕಿತ್ಸೆ ಬಳಿಕ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಸುರೇಶ್ ಪೈ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ದಂಡು ಮತ್ತು ಸರವನ್ನು ಬಾಲಕನ ದೇಹದಿಂದ ಹೊರತೆಗೆದಿದೆ.