ಕಾಸರಗೋಡು: ಆಸ್ತಿಗಾಗಿ ತನ್ನ ಸ್ವತಃ ಅಣ್ಣನನ್ನೇ ಕೊಲೆಗೈದ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ತಮ್ಮನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನನ್ನು ಕೊಲೆಗೈದು, ಇಬ್ಬರಿಗೆ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಕೊಲೆಯಾದವರು ಚೆಮ್ನಾಡು ಮಾವಿಲ ರೋಡ್ ತೆರವಳಪ್ಪಿಲ್ ಎ. ಚಂದ್ರನ್ ನಾಯರ್ (52) ಎನ್ನಲಾಗಿದ್ದು, ಚಾಕು ಇರಿತಕ್ಕೆ ಒಳಗಾದವರು ಪೆರವಳಪ್ಪಿಲ್ ಮಣಿಕಂಠನ್ (48) ಮತ್ತು ಗೋಪಿನಾಥನ್(48). ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಕೂಲಿ ಕಾರ್ಮಿಕರಾಗಿರುವ ಎ. ಚಂದ್ರನ್ ನಾಯರ್ ಅವರು ನ. 11ರಂದು ರಾತ್ರಿ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಆಸ್ತಿ ಹೆಸರಿನಲ್ಲಿ ತಮ್ಮ ಎ. ಗಂಗಾಧರನ್ ನಾಯರ್ (48) ಮಧ್ಯೆ ಪರಸ್ಪರ ವಾಗ್ವಾದ ಉಂಟಾಗಿದೆ. ಈ ವೇಳೆ ಗಂಗಾಧರನ್ ಚಾಕುವಿನಿಂದ ಚಂದ್ರನ್ ನಾಯರ್ ಅವರ ಎದೆಗೆ ಇರಿದಿದ್ದ. ಈ ಸಂದರ್ಭದಲ್ಲಿ ತಡೆಯಲು ಹೋದ ಇಬ್ಬರು ವ್ಯಕ್ತಿಗಳು ಚಾಕು ಇರಿತಕ್ಕೆ ಒಳಗಾಗಿದ್ದಾರೆ.
ಆರೋಪಿ ಗಂಗಾಧರನ್ ನಾಯರ್‌ನನ್ನು ನೆರೆಮನೆಯವರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.


