ಬೆಳ್ತಂಗಡಿ : ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಚರಂಡಿ ಕೆಲಸದಲ್ಲಿ ನಡೆದ ಲಕ್ಷಾಂತರ ರೂಪಾಯಿ ಅವ್ಯಹಾರ ಪ್ರಕರಣ ಸಂಬಂಧ ಎರಡು ದಿನಗಳಿಂದ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ 2021-22 ರಲ್ಲಿ ಚರಂಡಿ ಕೆಲಸದಲ್ಲಿ 30 ಲಕ್ಷ ಹಣವನ್ನು ಅವ್ಯಹಾರ ನಡೆಸಲಾಗಿದೆ. ಚರಂಡಿ ಕೆಲಸವನ್ನು 20% ಕೂಡ ನಡೆಸಿಲ್ಲ ಎಂದು ಈ ಹಿಂದೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪಂಚಾಯತ್ ಮುಂದೆ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಬಳಿಕ ಪಿಡಿಓ ಅಗಿದ್ದ ಸವಿತಾ, ಗ್ರಾ.ಪಂ ಅಧ್ಯಕ್ಷ ಅಡಿಲು ಅನಂದ , ಇಂಜಿನಿಯರ್ ಹರ್ಷಿತ್ ವಿರುದ್ಧ ಸ್ಥಳೀಯ ನಿವಾಸಿ ಜಯರಾಮ್ ಗೌಡ ಬಂಗಾಡಿ ಎಂಬವರು 2023 ಜೂನ್ ತಿಂಗಳಲ್ಲಿ ಬೆಂಗಳೂರು ಲೋಕಾಯಯಕ್ತ ಕೇಂದ್ರ ಕಚೇರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ಅಂತರಿಕ ತನಿಖೆ ನಡೆಸುತ್ತಿದ್ದರು.ಇದೀಗ ಜು.9 ರಂದು ಬೆಳಗ್ಗೆ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಇಂಜಿನಿಯರ್ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.ಮತ್ತೆ ಜು.10 ರಂದು ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಬಂದು ತನಿಖೆ ನಡೆಸಿ ದೂರುದಾರ ಜಯರಾಮ್ ಬಂಗಾಡಿ ಜೊತೆ ಚರಂಡಿ ಕೆಲಸಗಳನ್ನು ಪರಿಶೀಲನೆ ನಡೆಸಿ ಮಹಜರ್ ಮಾಡಿ ತೆರಳಿದ್ದಾರೆ.



