ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಸಾವಿರಾರು ಜನರು ದೇಶವನ್ನು ತೊರೆಯಲು ಮುಂದಾಗಿದ್ದು, ಒಂದೆಡೆ ವಿಮಾನ ನಿಲ್ದಾಣದಲ್ಲಿ ಶವಗಳು ಬಿದ್ದಿದ್ದರೆ, ಮತ್ತೊಂದೆಡೆ ಜನರು ಜೀವ ಭಯದಿಂದ, ಕೊನೆಯ ವಿಮಾನ ಹತ್ತಲು ಯತ್ನಿಸುತ್ತಿರುವ ದೃಶ್ಯಗಳು ಬೆಚ್ಚಿ ಬೀಳುವಂತೆ ಮಾಡಿವೆ.

ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು, ಮಹಿಳೆಯರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕದ ಸೈನಿಕರು ಕೂಡ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಮಾಧ್ಯಮ ವರದಿಗಳ ಪ್ರಕಾರ, ಗುಂಡಿನ ದಾಳಿಗೆ ಐದು ಮಂದಿ ಸಾವನ್ನಪ್ಪಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯನ್ನು ತಾಲಿಬಾನ್ ಖಚಿತಪಡಿಸಿಲ್ಲ. ಪ್ರಸ್ತುತ ವಿಮಾನ ನಿಲ್ದಾಣವು ಅಮೆರಿಕದ ಸೈನಿಕರ ನಿಯಂತ್ರಣದಲ್ಲಿದೆ.
ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಸದ್ಯ ವಾಣಿಜ್ಯ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ ಅನೇಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಭಾರತ, ತನ್ನ ನಾಗರಿಕರನ್ನು ರಕ್ಷಿಸಲು ಚಬಹಾರ್ ಪೋರ್ಟ್ ಬಳಸಲಿದೆ ಎನ್ನಲಾಗುತ್ತಿದೆ.
ವೀಸಾ, ಟಿಕೆಟ್ ಇಲ್ಲದೆ ಜನರು ವಿಮಾನ ನಿಲ್ದಾಣಕ್ಕೆ ಬಂದ್ರೆ ಇನ್ನೊಂದು ಕಡೆ ತಾಲಿಬಾನಿ ಉಗ್ರರು, ಅಫ್ಘಾನಿಸ್ತಾನದ ಬೀದಿಯಲ್ಲಿ ಸುತ್ತುತ್ತಿದ್ದಾರೆ. ಆಗಸ್ಟ್ 17ರ ಬೆಳಿಗ್ಗೆ 8 ಗಂಟೆಯವರೆಗೆ ಮನೆಯಲ್ಲಿ ಬಂಧಿಯಾಗಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ.


