ಉಡುಪಿ: ಭೂಮಿಯಲ್ಲಿ ರೈತರು ಕೃಷಿ ಬೆಳೆದಂತೆ, ಮೀನುಗಾರರು ಕೂಡಾ ಸಮುದ್ರ, ಹೊಳೆಯಲ್ಲಿ ಜೀವದ ಹಂಗು ತೊರೆದು ನಡೆಸುವ ಕಷ್ಟದ ಉದ್ಯಮವಾಗಿದೆ ಎಂದು ಶಾಸಕ ಯಶ್ ಪಾಲ್ ಎ.ಸುವರ್ಣ ಹೇಳಿದರು.
ಮಂಗಳವಾರ ಕಡಿಯಾಳಿ ಖಾಸಗಿ ಹೋಟೆಲ್ ನಲ್ಲಿ (ಜ.20) ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ ಹಾಗೂ ಉಡುಪಿ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆಯ ನಿಯಮ ಮತ್ತು ಮೀನುಗಾರರಿಗೆ ಕೃಷಿಕರಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಲಿ ಎಂದು ಈ ಕಾರ್ಯಾಗಾರದ ಮೂಲಕ ಸರ್ಕಾರದ ಗಮನ ಸೆಳೆಯುವಂತಾಗಲಿ ಎಂದು ಯಶ್ ಪಾಲ್ ಸುವರ್ಣ ಒತ್ತಾಯಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಿವೃತ್ತ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಎಸ್.ಎನ್.ಸಂತೋಷ್ ಕುಮಾರ್ ಅವರು ವ್ಯಕ್ತಿತ್ವ ವಿಕಸನ ಮತ್ತು ಒತ್ತಡ ನಿರ್ವಹಣೆ ವಿಷಯದ ಕುರಿತು ಉಪನ್ಯಾಸ ನೀಡಿದರು.


