ಬೆಂಗಳೂರು: ಡ್ರೋನ್ ತಯಾರಿಸಿದ್ದೇನೆಂದು ಪುಂಗಿ ಊದಿ ಎಲ್ಲರನ್ನು ಮೋಡಿ ಮಾಡಿದ್ದ ಡ್ರೋಣ್ ಪ್ರತಾಪ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಇದು ಡ್ರೋನ್ ಬಗ್ಗೆ ಸುಳ್ಳು ಹೇಳಿ ಜನರನ್ನು ವಂಚಿಸಿದ ಪ್ರಕರಣವಲ್ಲ, ಇದು ಕೊವಿಡ್ 19ಗೆ ಸಂಬಂಧಿಸಿದ ವಿಷಯ.
ಹೌದು, ಮಳವಳ್ಳಿ ಮೂಲದ ಡ್ರೋನ್ ಪ್ರತಾಪ್ ವಿರುದ್ಧ ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದರೂ ಮನೆಯಿಂದ ಹೊರಗಡೆ ಓಡಾಡಿದ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿದೆ.
ಡಾ. ಪ್ರಯಾಗ್ ಎಂಬುವರು ದೂರು ನೀಡಿದ್ದು, ಕಳೆದ ಕೆಲ ದಿನಗಳ ಹಿಂದೆ ಡ್ರೋಣ್ ಪ್ರತಾಪ್ ಹೈದರಾಬಾದ್ ಗೆ ತೆರಳಿದ್ದ ಎನ್ನಲಾಗಿದೆ. ನಂತರ ಬೆಂಗಳೂರಿಗೆ ವಾಪಾಸ್ ಆಗಿದ್ದ. ಅಂತರರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ, ಈ ನಿಯಮ ಮೀರಿ ಡ್ರೋಣ್ ಪ್ರತಾಪ್, ಕಳೆದ ಮೂರು ದಿನಗಳ ಹಿಂದೆ ಖಾಸಗಿ ಚಾನಲ್ ವೊಂದರಲ್ಲಿ ಲೈವ್ ನಲ್ಲಿ ಭಾಗವಹಿಸಿದ್ದಾನೆಂದು ಆರೋಪಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.


