ಮಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಕೇಳಿಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಮುಖಂಡರ ನಡುವೆ ಈ ಸ್ಟಿಂಗ್ ನಡೆದಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿರುವುದನ್ನು ಉಲ್ಲೇಖಿಸಿದರು. 2011ರಲ್ಲಿ ನಡೆದಿರುವ ಈ ಪ್ರಕರಣವನ್ನು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯಲು ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇದರ ಹಿಂದೆ ಯಾರಿದ್ದಾರೆ ಮತ್ತು ಯಾರೆಲ್ಲ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಬೇಕು ಎಂದರು.
ತಮ್ಮ ತಂದೆಯ ಹೆಸರಿಗೆ ಧಕ್ಕೆ ತರಲು ಈ ಸ್ಟಿಂಗ್ ನಡೆಸಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಪುತ್ತೂರಿನ ಶಾಸಕರು ಕೂಡ ಇದೇ ರೀತಿಯಲ್ಲಿ ಟಿಕೆಟ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇಂತಹ ಸ್ಟಿಂಗ್ಗಳು ಬೇರೆ ಕ್ಷೇತ್ರಗಳಲ್ಲೂ ನಡೆದಿವೆಯೇ ಎಂಬ ಬಗ್ಗೆ ಜನರಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಿ, ಶೀಘ್ರದಲ್ಲೇ ಸತ್ಯವನ್ನು ಜನರ ಮುಂದಿಡಬೇಕು ಎಂದು ಸತೀಶ್ ಕುಂಪಲ ಒತ್ತಾಯಿಸಿದರು.


