ಪುತ್ತೂರು:ಕೊರೋನಾ ಆತಂಕದ ನಡುವೆಯೇ ತಾಲೂಕಿನ ಬೆಟ್ಟಂಪಾಡಿ ಸಹಿತ ಕೆಲವೆಡೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದು ಸಾರ್ವಜನಿಕರ ಆತಂಕವನ್ನು ಇಮ್ಮಡಿಗೊಳಿಸಿದೆ.ಬಹುತೇಕ ಗ್ರಾಮೀಣ ಭಾಗದ ಜನರಲ್ಲಿ ಈ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಕೆಲವರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಕೆಲವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾರಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿ ತಿಂಗಳು ಕಳೆದಿದ್ದು ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾದ ಕೆಲವರಿಗೆ ಇದೀಗ ಡೆಂಗ್ಯೂ ಜ್ವರ ಬಾಧಿಸಿದೆ.ಬೆಟ್ಟಂಪಾಡಿಯ ಸುಮಾರು ೧೦ ಮಂದಿಗೆ ಡೆಂಗ್ಯೂ ಬಾಧಿಸಿದ್ದು ಅವರಲ್ಲಿ ಕೆಲವರು ಔಷಧಿ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರೆ ಕೆಲವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.ಡೆಂಗ್ಯೂ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು ಹೂವಿನ ಕುಂಡ,ಬಿಸಾಕಿದ ಟೈರ್, ಹಳೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳಿಂದ ರೋಗ ಹರಡುತ್ತದೆ.ಇದೀಗ ಮಳೆಯೂ ಸುರಿಯಲಾರಂಭಿಸಿದ್ದರಿಂದಾಗಿ ಡೆಂಗ್ಯೂ ಹೆಚ್ಚಳಗೊಳ್ಳುವ ಆತಂಕವಿರುವುದರಿಂದ ಆರೋಗ್ಯ ಇಲಾಖೆ ಈಗಲೇ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎನ್ನುವುದು ನಾಗರಿಕರ ಆಗ್ರಹ.
ಈ ಕುರಿತು ಮಾತನಾಡಿರುವ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಈಗಾಗಲೇ ಮಹಾಮಾರಿ ಕೊರೋನಾ ವೈರಸ್ ರೋಗ ಭಯದಿಂದ ತತ್ತರಿಸಿದ ಜನತೆಗೆ ಇನ್ನೊಂದು ರೋಗ ಡೆಂಗ್ಯು ಜ್ವರ ತಲೆನೋವು ನೀಡಿದೆ.ಬೆಟ್ಟಂಪಾಡಿ ಗ್ರಾಮದಲ್ಲಿ ಇದುವರೆಗೆ ಸುಮಾರು ೨೦ಕ್ಕಿಂತಲೂ ಹೆಚ್ಚು ಜನರಿಗೆ ಡೆಂಗ್ಯು ಬಾಧಿಸಿದ್ದು ಇದು ಆತಂಕವನ್ನು ತಂದೊಡ್ಡಿದೆ.ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ.ಗ್ರಾಮದಾದ್ಯಂತ ಫಾಗಿಂಗ್ ಇನ್ನಿತರ ಮುಖ್ಯ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.ತಕ್ಷಣ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನನ್ನ ಕೋರಿಕೆ ಎಂದಿದ್ದಾರೆ.