ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ನಿಯಮ ಇದ್ದರೂ ಇದಾವುದರ ಚಿಂತೆ ಇಲ್ಲದೆ ಅಲೆಮಾರಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬೀದಿ ಬೀದಿ ಸುತ್ತುತ್ತಾ ಗಲಾಟೆ ಮಾಡುತ್ತಿರುವುದಕ್ಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನದ ಅಲೆಮಾರಿ ದಂಪತಿಯನ್ನು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರ ನಿರ್ದೇಶನದಂತೆ ಕೊರೋನಾ ಪ್ಲೈಯಿಂಗ್ ಸ್ಕಾಡ್‌ನ ತಾಲೂಕು ಶಿಶು ಅಭಿವೃದ್ಧಿಯೋಜನಾಧಿಕಾರಿ ಶ್ರೀಲತಾ ಅವರು ದಂಪತಿಯ ಮನವೊಲಿಸಿ ಪುತ್ತೂರು ನೆಲ್ಲಿಕಟ್ಟೆ ಶಾಲೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದಾರೆ.
ಸಕಲೇಶಪುರದ ಸ್ಕಂದೇಶ್ ಮತ್ತು ಶಿರಸಿ ಮೂಲದ ಲಕ್ಷ್ಮೀ ದಂಪತಿ ತಮ್ಮ ಇಬ್ಬರು ಪುಟ್ಟ ಪುಟ್ಟ ಮಕ್ಕಳೊಂದಿಗೆ ಕಳೆದ ಒಂದು ವಾರದಿಂದ ಉಪ್ಪಿನಂಗಡಿಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ಬಿಕ್ಷೆ ಬೇಡುತ್ತಿದ್ದರು. ದಂಪತಿ ಮದ್ಯೆ ಆಗಾಗ ಕಳಹ ನಡೆಯುತ್ತಿದ್ದು ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿತ್ತು. ದಂಪತಿ ಕಳಹ ತಾರಕ್ಕೇರಿ ಮಕ್ಕಳಿಗೂ ಹೊಡೆಯುವುದು ಬೆಳಕಿಗೆ ಬಂದಿತ್ತು. ಘಟನೆಯ ಕುರಿತು ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಮತ್ತೆ ಮತ್ತೆ ದಂಪತಿ ಕಳಹ ಆಗಾಗೆ ನಡೆಯುತ್ತಿತ್ತು. ಕೊನೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಘಟನಾ ಸ್ಥಳಕ್ಕೆ ತೆರಳಿ ದಂಪತಿ ಮಕ್ಕಳನ್ನು ಪುತ್ತೂರು ನೆಲ್ಲಿಕಟ್ಟೆ ಶಾಲೆಯಲ್ಲಿ ಕರೆದು ಕೊಂಡು ಬಂದಿದ್ದರು. ತಹಶೀಲ್ದಾರ್ ರಮೇಶ್ ಬಾಬು ಟಿ ಮತ್ತು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ಸಹಕಾರದೊಂದಿಗೆ ಶಾಲೆಯ ಒಂದು ಕೊಠಡಿಯಲ್ಲಿ ದಂಪತಿ, ಮಕ್ಕಳಿಗೆ ಆಶ್ರಯ ನೀಡಿದರಲ್ಲದೆ ಅವರ ಅರೋಗ್ಯ ವಿಚಾರಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್, ಕಂದಾಯ ನಿರೀಕ್ಷ ರವಿ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
