ಬೆಳಗಾವಿ: ನನ್ನ ವಿರುದ್ಧ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಪತಿ ಸಹೋದರನ ವಿರುದ್ಧ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಆಸ್ತಿಯನ್ನು ಕಬಳಿಸಲು ನನ್ನ ಪತಿ ದಿ. ಶಿವಕಾಂತ ಸಿದ್ನಾಳ ಅವರ ಸಹೋದರ ಉದ್ಯಮಿ ಶಶಿಕಾಂತ ಸಿದ್ನಾಳ, ಪತ್ನಿ ವಾಣಿ ಸಿದ್ನಾಳ ಹಾಗೂ ಪುತ್ರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ದಿಗ್ವಿಜಯ ಸಿದ್ನಾಳ ಅವರು ನನ್ನ ವಿರುದ್ಧ ಮಾಟ ಮಂತ್ರ ಮಾಡಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಿಧನರಾದ ನನ್ನ ಪತಿ ದಿ. ಶಿವಕಾಂತ ಸಿದ್ನಾಳ ಅವರ ಸಮಾಧಿಯ ಮೇಲೂ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ತನ್ನ ಪತಿಯ ಸಹೋದರನ ಕುಟುಂಬದ ವಿರುದ್ಧವೇ ದೀಪಾ ಸಿದ್ನಾಳ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಜಿ ಸಂಸದ ಎಸ್.ಬಿ. ಸಿದ್ನಾಳ ಅವರ ಪುತ್ರ, ದೀಪಾ ಅವರ ಪತಿ ದಿ. ಶಿವಕಾಂತ ಸಿದ್ನಾಳ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದ ಬಳಿಕ ಇವರ ಒಡೆತನದ ವಿಜಯಕಾಂತ ಡೈರಿಯನ್ನು ಶಶಿಕಾಂತ ಸಿದ್ನಾಳ ಕುಟುಂಬ ಕಬಳಿಸಲು ಪ್ಲ್ಯಾನ್ ಮಾಡಿದ್ದು, ಇದಕ್ಕಾಗಿ ತಮ್ಮ ವಿರುದ್ಧ ಮಾಟಮಂತ್ರ ನಡೆಸಲಾಗಿದೆ. ಜತೆಗೆ ತಮ್ಮ ಪತಿ ಶಿವಕಾಂತ ಅವರ ಸಮಾಧಿ ಮೇಲೂ ವಾಮಾಚಾರ ನಡೆಸಲಾಗಿದೆ ಎಂದು ದೀಪಾ ದೂರು ನೀಡಿದ್ದಾರೆ.


