ಮಂಗಳೂರು: ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ಮಠದ ವಿರುದ್ಧ 2009 ಮೇ 27 ರ ʼಗೌರಿ ಲಂಕೇಶ್ʼ ಪತ್ರಿಕೆಯಲ್ಲಿ ಅವಹೇಳನಕಾರಿ ಹಾಗೂ ಜಾತಿಗಳ ನಡುವೆ ವೈರುಧ್ಯ ಉಂಟುಮಾಡುವ ಬರಹ ಪ್ರಕಟವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂಕಣಕಾರ ಬಿಳಿದಾಳೆ ಈಶ ಅವರನ್ನು ಪುತ್ತೂರಿನ ನ್ಯಾಯಾಲಯವು ದೋಷಮುಕ್ತಿಗೊಳಿಸಿದೆ.
ಮಠದ ಭಕ್ತರಾದ ಉಪ್ಪಿನಂಗಡಿಯ ಕೇಶವ ಕೃಷ್ಣ ಅವರು ಪುತ್ತೂರು ನ್ಯಾಯಾಲಯಕ್ಕೆ ಈ ಬಗ್ಗೆ ಖಾಸಗಿ ದೂರು ಸಲ್ಲಿಸಿದ್ದರು. ಗೌರಿ ಲಂಕೇಶ್ ಅವರನ್ನು ಮೊದಲ ಆರೋಪಿಯಾಗಿ, ಅಂಕಣಕಾರ ಬಿಳಿದಾಳೆ ಈಶ ಅವರನ್ನು ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನು ರೂಪಿಸಿತ್ತು.
ಆದರೆ ದೂರಿನ ಬಗ್ಗೆ ವಿಚಾರಣೆ ನಡೆಯುತ್ತಿದ್ದ ವೇಳೆ ಗೌರಿ ಲಂಕೇಶ್ ಹತ್ಯೆಗೊಳಗಾದರು. ಎರಡನೇ ಆರೋಪಿ ಬಿಳಿದಾಳೆ ಈಶ ವಿರುದ್ಧ ಸುದೀರ್ಘ 16 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಫೆ.7ರಂದು ಅವರನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್, ಸಲೀನಾ ನೆಕ್ಕಿಲಾಡಿ ಹಾಗೂ ಮಿಸ್ರಿಯಾ ಮಿತ್ತೂರು ವಾದ ಮಂಡಿಸಿದ್ದರು.


