ಮಂಗಳೂರು: ಕೊರೋನಾ ರೋಗ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು 2 ದಿನದ ಮಟ್ಟಿಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ಜಾಗೃತಿಯ ಬಗ್ಗೆ ಕೈ ಮುಗಿದು ಪ್ರಾರ್ಥನೆ ಮಾಡಿದರೂ ಬುದ್ದಿವಂತರ ಜಿಲ್ಲೆಯ ಜನತೆಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ 2 ದಿನದ ಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಆದರೆ ನಿನ್ನೆ ಸಂಜೆ ಜಿಲ್ಲಾಡಳಿತ ನೀಡಿರುವ ಆದೇಶದಂತೆ ಇಂದು ಬೆಳಿಗ್ಗೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ದಿನವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಆದೇಶ ನೀಡಿರುವ ಜಿಲ್ಲಾಡಳಿತ ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಂತೂ ಜನ ದಿನಸಿ ಸಾಮಾನು ಖರೀದಿಸಲು ಬಂದಿದ್ದಾರೋ ಅಥವಾ ಕೊರೋನಾವನ್ನೇ ಮನೆಗೆ ಚೀಲದಲ್ಲಿ ತುಂಬಿಸಿಕೊಂಡು ಹೋಗುತ್ತಾರೋ ಎನ್ನುವಂತಿತ್ತು ಇಂದು ಬೆಳಗ್ಗಿನ ಪರಿಸ್ಥಿತಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮಾರುಕಟ್ಟೆಯಲ್ಲಿ ಜನತೆ ಇಂದು ಸಂಪೂರ್ಣ ಮರೆತಿದ್ದರು. ಮನೆಯಿಂದ ಒಬ್ಬ ವ್ಯಕ್ತಿ ಬಂದು ಸಾಮಾನು ಸರಂಜಾಮುಗಳನ್ನು ಖರೀದಿಸಬೇಕೆಂದು ಜಿಲ್ಲಾಡಳಿತದ ಆದೇಶವಿದ್ದರೂ ಲಾಕ್ ಡೌನ್ ಮಾಡುವ ಬದಲು ಲಾಕ್ ಹೋಂ ಮಾಡಿ ಅಂದರೆ ಮನೆಗೆ ಬೀಗ ಹಾಕಿ ಶಾಪಿಂಗ್ ಮಾಡಲು ಬಂದಿದ್ದರು. ಇಂದಿನ ಜನದಟ್ಟಣೆಯನ್ನು ನೋಡಿದರೆ ಈ ಹಿಂದೆ ಯಾವುದೇ ಹಬ್ಬದ ಸಮಯದಲ್ಲೂ ಮಾರ್ಕೆಟ್ ನಲ್ಲಿ ಇಷ್ಟು ಜನದಟ್ಟಣೆ ಇರಲಿಲ್ಲ ಎಂದು ವ್ಯಾಪಾರಿಯೊಬ್ಬರು “ಮಹಾ ಎಕ್ಸ್ಪ್ರೆಸ್” ಜೊತೆ ಅಭಿಪ್ರಾಯ ಹಂಚಿಕೊಂಡರು.
ಮಂಗಳೂರು ನಗರವಷ್ಟೇ ಅಲ್ಲದೆ ಬಂಟ್ವಾಳ, ಪುತ್ತೂರು, ವಿಟ್ಲ ಹಾಗು ಬೆಳ್ತಂಗಡಿ ನಗರದಲ್ಲೂ ಜನದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಇತ್ತು. 2 ದಿನ ಲಾಕ್ ಡೌನ್ ಸಮಯವನ್ನು ಸಮರ್ಪಕವಾಗಿ ನಿಭಾಯಿಸಿದ್ದ ದ.ಕ ಜಿಲ್ಲಾಡಳಿತ, ಇಂದು ತೆಗೆದುಕೊಂಡಿರುವುದು ಅವೈಜ್ಞಾನಿಕ ನಿರ್ಧಾರ ಎಂದು ಈ ಮೂಲಕ ಕಂಡು ಬರುತ್ತದೆ. ಈ ಹಿಂದೆ ಸಂಸದರು ಹೇಳಿಕೆ ನೀಡಿರುವಂತೆ ಮನೆ ಮನೆಗೆ ಅಥವಾ ವಾರ್ಡ್ ವಾರ್ ಜೀವನಾವಶ್ಯಕ ವಸ್ತುಗಳನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಆದಷ್ಟು ಬೇಗ ಜಾರಿಗೊಳಿಸಿದರೆ ಮಾತ್ರ ವೇಗವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯನ್ನು ತಡೆಯಬಹುದು.