ಕುಂದಾಪುರ: ಹಿಜಾಬ್ ವಿವಾದ ಶುಕ್ರವಾರವೂ ಮುಂದುವರಿದಿದೆ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಇಂದೂ ಕೂಡಾ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಣೆ ಮಾಡಿದ ಘಟನೆ ನಡೆದಿದೆ.
ಕಾಲೇಜು ಆವರಣದೊಳಕ್ಕೆ ಪ್ರವೇಶಿಸುವಂತಿಲ್ಲ ಎಂದು ಪ್ರಾಂಶುಪಾಲರು ಸೂಚಿಸಿದ ಹೊರತಾಗಿಯೂ ವಿದ್ಯಾರ್ಥಿಗಳು ಗೇಟ್ ತಳ್ಳಿ ಒಳಕ್ಕೆ ಪ್ರವೇಶಿಸಿ ಕಾಲೇಜು ಆವರಣದಲ್ಲಿ ಇರಲು ಅವಕಾಶ ನೀಡುವಂತೆ ಆಗ್ರಹಿಸಿದರು.
ವಿದ್ಯಾರ್ಥಿನಿಯರನ್ನು ತರಗತಿಗೆ ಸ್ಕಾರ್ಫ್ ಧರಿಸಿ ತೆರಳಲು ಅನುಮತಿ ನೀಡದ ಕಾಲೇಜು ಆಡಳಿತದ ವಿರುದ್ಧ ಪೊಷಕರು ಆಕ್ಷೇಪಿಸಿ, ಗೇಟ್ ಹೊರಭಾಗದಲ್ಲಿ ನಿಂತು ಪ್ರತಿಭಟಿಸಿದರು. ಇಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಕುಂದಾಪುರ ಡಿವೈಎಸ್‌ಪಿ ಹೇಳಿದಾಗ ಮಾತಿನ ಚಕಮಕಿ ನಡೆಯಿತು.
ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಓಡಾಡಲು ಆರಂಭಿಸಿದರು. ಅವರನ್ನೂ ಹೊರಕ್ಕೆ ಕಳುಹಿಸುವಂತೆ ಪೋಷಕರು ಆಕ್ಷೇಪಿಸಿದಾಗ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಹೊರಕಳುಹಿಸಲಾಯಿತು.
ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈ ಶ್ರೀರಾಮ ಘೋಷಣೆ ಕೂಗುತ್ತಾ ಹೊರಬರುತ್ತಿದ್ದಂತೆ ಗೇಟಿನ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಿಂದೂ ಸಂಘಟನೆ ಹಾಗೂ ಮುಸ್ಲಿಂ ಸಂಘಟನೆಯ ಮುಖಂಡರು ಪರಸ್ಪರ ವಿದ್ಯಾರ್ಥಿಗಳ ಪರ ಮಾತಿಗೆ ಮುಂದಾದರು. ಪೊಲೀಸರು ಮುಂದೆ ತಮ್ಮ ತಮ್ಮ ಅಹವಾಲು ಹೇಳಿಕೊಂಡರಾದರೂ ಸರಕಾರದ ಆದೇಶ ಪಾಲನೆ ಅಗತ್ಯವೆಂದು ಪೊಲೀಸರು ಎಲ್ಲರನ್ನೂ ಚದುರಿಸಿದರು. ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ಮತ್ತೆ ತರಗತಿ ಒಳಗೆ ಪ್ರವೇಶಿಸಿದರೂ, ವಿದ್ಯಾರ್ಥಿನಿಯರು ಸ್ಕಾರ್ಫ್ ತೆಗೆಯಲು ಒಪ್ಪದೇ ಮತ್ತೆ ಗೇಟಿನ ಬಳಿಯೇ ನಿಂತಿದ್ದರು.


