ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿಯ ಶೆಡ್‌ವೊಂದರಲ್ಲಿ ವಾಸವಾಗಿರುವ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಿರುವುದು ದೃಢಪಟ್ಟಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಹಣ ಪ್ರಕರಣ ದಾಖಲಾಗಿದೆ.
ಕರಾವಳಿ ಬೈಪಾಸ್ ಬಳಿಯ ಶೆಡ್ ವೊಂದರಲ್ಲಿ ವಾಸವಾಗಿರುವ ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಮಗ ಶಿವರಾಜ್ (2.4 ವರ್ಷ) ಎಂಬಾತನನ್ನು ಇಂದು ಬೆಳಗ್ಗೆ ಬಾಗಲಕೋಟೆಯ ಪರಶು ಎಂಬಾತ ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ಕರಾವಳಿ ಬೈಪಾಸ್‌ನಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಅದರಲ್ಲಿ ಆತ ಮಗುವನ್ನು ಎತ್ತಿಕೊಂಡು ಕರಾವಳಿ ಬೈಪಾಸ್‌ನಿಂದ ಕೆಮ್ಮಣ್ಣು ಕಡೆಯ ಸಿಟಿ ಬಸ್ ನಲ್ಲಿ ಹೋಗಿರುವುದು ಕಂಡುಬಂದಿದೆ.
ಆದರೆ ಆ ಬಸ್ಸಿನ ನಿರ್ವಾಹಕರನ್ನು ವಿಚಾರಿಸಿದಾಗ ಆ ವ್ಯಕ್ತಿ ಕುಂದಾಪುರ ಕಡೆ ಹೋಗುವ ಬಸ್ ಎಂಬುದಾಗಿ ಭಾವಿಸಿ ಸಿಟಿ ಬಸ್ ಹತ್ತಿದ್ದು, ಬಳಿಕ ಸಂತೆ ಕಟ್ಟೆಯಲ್ಲಿ ಮಗುವಿನೊಂದಿಗೆ ಇಳಿದಿದ್ದಾನೆ ಎಂದು ತಿಳಿದುಬಂದಿದೆ. ಈತ ಮಗು ವನ್ನು ಅಪಹರಿಸಿ ಕುಂದಾಪುರ ಕಡೆ ಹೋಗಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.