Friday, April 26, 2024
Homeಕರಾವಳಿಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿವೆ ಕೊಲೆಗಡುಕರ ದುಷ್ಕೃತ್ಯಗಳು: ಮೃತದೇಹಗಳ ತಾಣವಾದ ಚಾರ್ಮಾಡಿ ಘಾಟ್ ಕಣಿವೆಗಳು

ಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿವೆ ಕೊಲೆಗಡುಕರ ದುಷ್ಕೃತ್ಯಗಳು: ಮೃತದೇಹಗಳ ತಾಣವಾದ ಚಾರ್ಮಾಡಿ ಘಾಟ್ ಕಣಿವೆಗಳು

spot_img
- Advertisement -
- Advertisement -

ಬೆಳ್ತಂಗಡಿ : ಮಲೆನಾಡಿನ ಹಸಿರ ರಮಣಿಯ ತಾಣವೂ ದಕ್ಷಿಣಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂದಿಸುವ ಸಂಪರ್ಕ ಸೇತು, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಚಾರ್ಮಾಡಿ ಘಾಟ್ ಕೊಲೆಗಡುಕರ ತಾಣವಾಗುತ್ತಿದೆ.

ಭಯವಿಲ್ಲದೇ ಕೊಲೆಗಡುಕರು ದೂರದ ಊರಿನಿಂದ ಕೊಲೆ ಮಾಡಿ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನಲ್ಲಿ ಹೆಣ ಎಸೆದು ಪರಾರಿಯಾಗುತ್ತಾರೆ. ಆದರೆ ಪೊಲೀಸರ ಕಾರ್ಯಕ್ಷಮತೆಯಿಂದ ಕೆಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಸೆರೆ ಹಿಡಿದು ಪ್ರಕರಣ ಬಯಲು ಮಾಡುತ್ತಾರೆ. ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕೊಲೆಗಡುಕರು ಚಾರ್ಮಾಡಿ ಘಾಟ್‌ನ್ನು ಆಯ್ಕೆ ಮಾಡಿಕೊಂಡು ಕಾರಿನಲ್ಲಿ ಬಂದು ದುಷ್ಕೃತ್ಯವನ್ನು ಎಸಗಿ ಸಾಗುತ್ತಾರೆ. ಇದರಿಂದ ಚಾರ್ಮಾಡಿ ಘಾಟ್ ಕೊಲೆಗಡುಕರಿಗೆ ನೆಲೆಯಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಲು ಸೂಕ್ತವಾದ ತಪಾಸಣಾ ತಂಡ, ಸಿಸಿ ಕ್ಯಾಮರಾ ಕಣ್ಗಾವಲು ಅಗತ್ಯವಾಗಿದೆ. ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗಳಿವೆ. ಆದರೆ ಕೊಟ್ಟಿಗೆಹಾರದಲ್ಲಿ ಪೊಲೀಸರ ಪ್ರತ್ಯೇಕ ಚೆಕ್‌ಪೋಸ್ಟ್ ಇಲ್ಲದಂತಾಗಿದೆ. ಇದರಿಂದ ಕೊಲೆಗಡುಕರಿಗೆ ತಮ್ಮ ಕಾರ್ಯಸಾಧನೆ ಮೆರೆಯಲು ಸುಲಭವಾಗಿದೆ.

28 ಕಿ.ಮಿ ಅಂತರದ ಚಾರ್ಮಾಡಿ ಘಾಟ್‌ನಲ್ಲಿ ಈ ಹಿಂದೆ ಅನೇಕ ಕೊಲೆ ಪ್ರಕರಣಗಳು ಬೆಳಕಿಗೆ ಬಂದಿವೆ. 2008ರ ಜೂನ್ 11 ರಂದು ಶಿವಗಂಗಮ್ಮ ಎಂಬುವವರ ಶವವನ್ನು ವಾಹನದಲ್ಲಿ ತಂದು ಎಸೆಯಲಾಗಿತ್ತು. 2013 ರ ಜೂನ್ 21 ರಂದು ಮಲಯಮಾರುತದ ಝರಿಯ ಬಳಿ ಶಿವಮೊಗ್ಗದ ಮಂಗೋಟಿ ಗ್ರಾಮದದ ಮಮತಾ, 2012ರಲ್ಲಿ ಆಂಧ್ರಪ್ರದೇಶದ ವಜ್ರ ವ್ಯಾಪಾರಿಯೊಬ್ಬರನ್ನು ಬೆಂಗಳೂರಲ್ಲಿ ಕೊಲೆ ಮಾಡಿ ಚಾರ್ಮಾಡಿ ಘಾಟ್ ಕಣಿವೆಗೆ ವಾಹನದಲ್ಲಿ ತಂದು ಎಸೆಯಲಾಗಿತ್ತು. ಅದೇ ವರ್ಷದಲ್ಲಿ ಆಲ್ದೂರಿನ ವೃದ್ಧೆಯೊಬ್ಬರು ಚಾರ್ಮಾಡಿ ಪ್ರಪಾತದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. 2016ರಲ್ಲಿ ಚನ್ನರಾಯಪಟ್ಟಣದ ಕಾಂತ ಎಂಬ ಮಹಿಳೆಯ ಶವವನ್ನು ಸೋಮನಕಾಡು ಪ್ರಪಾತಕ್ಕೆ ಎಸೆಯಲಾಗಿತ್ತು. 2020 ರಲ್ಲಿ ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿ ಕಾರೊಂದರಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದರು. 2022 ರಲ್ಲಿ ಹಣದ ವಿಚಾರವಾಗಿ ಚಿಕ್ಕಬಳ್ಳಾಪುರದ ಶರತ್ ಎಂಬುವವನನ್ನು ಕೊಲೆ ಮಾಡಿ ಚಾರ್ಮಾಡಿ ಘಾಟ್ ನ ಪ್ರಪಾತಕ್ಕೆ ಎಸೆಯಲಾಗಿತ್ತು .ಪ್ರಕರಣ ಒಂಬತ್ತು ತಿಂಗಳ ಬಳಿಕ ಬೆಳಕಿಗೆ ಬಂದು ಆರೋಪಿಗಳ ಬಂಧನವಾದರೂ ಶವ ಹುಡುಕಾಟ ನಡೆಸಿದರೂ ಶವ ಮಾತ್ರ ಇನ್ನೂ ಪತ್ತೆಯಾಗಿಲ್ಲ. 2023 ರ ಜನವರಿ 30 ರಂದು ಬೆಂಗಳೂರಿನ ಮತ್ತಿಕೆರೆಯ ಯುವಕ ಗೋವಿಂದರಾಜ್‌ನನ್ನು ಕೊಲೆ ಮಾಡಿ ಚಾರ್ಮಾಡಿ ಘಾಟ್‌ಗೆ ಎಸೆಯಲಾಗಿತ್ತು.

ಇನ್ನು ಚಾರ್ಮಾಡಿ ಘಾಟ್‌ನಲ್ಲಿ ಸೆಲ್ಫಿ ಕ್ರೇಜ್ ನಿಂದಲೂ ಅನೇಕ ಅನಾಹುತಗಳು ನಡೆದಿವೆ. ಕೊಟ್ಟಿಗೆಹಾರದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳು ನಿರ್ವಹಣೆ ಕೊರತೆಯಿಂದ ನಿಷ್ಕ್ರೀಯಗೊಂಡಿದೆ. ಚೆಕ್‌ಪೋಸ್ಟ್ ನಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಅಪರಾಧ ಚಟುವಟಿಕೆ ನಡೆಸುವವರಿಗೆ ಅನುಕೂಲವಾಗಿದೆ. ಚೆಕ್‌ಪೋಸ್ಟ್ ನಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡದಿರುವುದು ಅಪರಾಧ ಚಟುವಟಿಕೆಗಳು ಹೆಚ್ಚಲು ಪ್ರಮುಖ ಕಾರಣವಾಗಿದೆ.

ಇದರಿಂದಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಚಾರ್ಮಾಡಿ ಘಾಟ್ ತೆರೆದ ಬಾಗಿಲಾಗಿದೆ.ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ರಾತ್ರಿಹೊತ್ತು ವಾಹನ ತಪಾಸಣೆ ಮಾಡುವ ಅಗತ್ಯವಿದೆ.ಈ ಹಿಂದೆ ನಡೆದ ಹಲವು ಪ್ರಕರಣಗಳು ರಾತ್ರಿ ಹೊತ್ತಿನಲ್ಲಿ ಹೆಚ್ಚು ನಡೆದಿರುವುದರಿಂದ ರಾತ್ರಿಯ ಹೊತ್ತಿನಲ್ಲಿ ಪೊಲೀಸರ ಕಣ್ಗಾವಲು ಅಥವಾ ಸಿಸಿಕ್ಯಾಮರಾ ಅಳವಡಿಸುವ ಅಗತ್ಯವಿದೆ.

SPOT

’ಚಾರ್ಮಾಡಿ ಘಾಟ್ ಮೀಸಲು ಅರಣ್ಯವಾಗಿದ್ದು ಇಲ್ಲಿ ಕೊಲೆಗಡುಕರು ಮೃತದೇಹ ಎಸೆದು ಹೋಗಿರುವುದು ಗಮನಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆಯ ಅಡಿಯಲ್ಲಿ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!