ಉಳ್ಳಾಲ: ಬೈಕ್ ಮತ್ತು ಕಾರು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಎರಜು ವಾಹನಗಳು ಕಮರಿಗೆ ಉರುಳಿದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ನಡೆದಿದೆ.
ಮಂಜನಾಡಿ ನಿವಾಸಿಗಳಾದ ಕೂಲಿ ಕಾರ್ಮಿಕರಿಬ್ಬರು ಬೈಕ್ ನಲ್ಲಿ ಓವರ್ ಬ್ರಿಡ್ಜ್ ನಿಂದ ಕಾಪಿಕಾಡಿಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು.ಈ ವೇಳೆ ಕುಂಪಲದಿಂದ ಉಳ್ಳಾಲಕ್ಕೆ ತೆರಳುತ್ತಿದ್ದ ವ್ಯಾಗನಾರ್ ಕಾರು ಮುಖಾ ಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಹೆದ್ದಾರಿ ಬದಿಯ ಆಳವಾದ ಕಮರಿಗೆ ಎಸೆಯಲ್ಪಟ್ಟರೆ, ಕಾರು ಕಮರಿನ ಅಂಚಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಇದರಿಂದ ವಿದ್ಯುತ್ ಕಂಬ ಧರೆಗುರುಳಿದೆ.
ಸ್ಥಳೀಯ ರಾಜ್ ಕೇಟರರ್ಸ್ ನ ಮಾಲೀಕರಾದ ರಾಜೇಶ್ ಕಾಪಿಕಾಡು ಮತ್ತು ವಾಹನ ಸವಾರರು ಸೇರಿ ತಕ್ಷಣ ಕಾರು ಮತ್ತು ಬೈಕ್ ಸವಾರರನ್ನು ಮೇಲಕ್ಕೆತ್ತಿದ್ದಾರೆ. ಕಾರು ಸವಾರರಾದ ಕುಂಪಲ ನಿವಾಸಿ ಸಂದೀಪ್ ಅವರು ಅಪಾಯದಿಂದ ಪಾರಾಗಿದ್ದರೆ. ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.