ತೆರೆ ಮೇಲೆ ಬಂದ ಕೂಡಲೇ ಸಿನಿ ಪ್ರಿಯರ ಮೊಗದಲ್ಲಿ ನಗು ಮೂಡಿಸುವ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ. ಅಂಗಾಂಗ ವೈಫಲ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕಾಶ್ ಇಂದು ಇಹಲೋಕ ತ್ಯಜಿಸಿದ್ದಾರೆ. 44 ವರ್ಷದ ನಟ ಪ್ರಕಾಶ್ ತಾಯಿ, ಪತ್ನಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ.
1976ರಲ್ಲಿ ಏ.2ರಂದು ಬೆಂಗಳೂರಿನ ಬಡ ಕುಟುಂಬದಲ್ಲಿ ಪ್ರಕಾಶ್ ಅವರ ಜನನವಾಗಿತ್ತು. ಕಾಟನ್ಪೇಟೆಯ ಗಲ್ಲಿಗಳಲ್ಲಿ ಆಡುತ್ತಾ ಬೆಳೆದ ಪ್ರಕಾಶ್ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಹಿಂದೆ ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. 35 ಕೆ.ಜಿ. ತೂಕ ಸಹ ಇಳಿಸಿಕೊಂಡಿದ್ದರು.
ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ಬುಲೆಟ್ ಪ್ರಕಾಶ್ ಅವರಿಗೆ ಸಿನಿಮಾಗಳಲ್ಲಿ ಅವಕಾಶ ತೀರಾ ಕಡಿಮೆಯಾಗಿತ್ತು. ಇದರಿಂದಾಗಿ ಪ್ರಕಾಶ್ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದರು. ಅನಾರೋಗ್ಯದ ಕಾರಣದಿಂದಾಗಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬುಲೆಟ್ ಪ್ರಕಾಶ್ ಸಿನಿ ಜರ್ನಿ
ಶಾಲಾ ದಿನಗಲ್ಲೇ ನೃತ್ಯ, ಮಿಮಿಕ್ರಿ ಹಾಗೂ ಏಕಪಾತ್ರಾಭಿನಯದಲ್ಲಿ ಎತ್ತಿದ ಕೈ…. ಆದರೆ ಓದಿನ ವಿಷಯಕ್ಕೆ ಬಂದರೆ ಮಾತ್ರ ಕೇಳುವಂತಿರಲಿಲ್ಲ. ಆಗಲೇ ಜಗ್ಗೇಶ್ ಅವರ ಮಿಮಿಕ್ರಿ ಮಾಡುತ್ತಿದ್ದ ಬುಲೆಟ್ ಪ್ರಕಾಶ್ 1991ರಲ್ಲೇ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಸಿನಿಮಾದ ‘ಹುಟ್ಟೋದ್ಯಾಕೆ ಸಾಯೋದ್ಯಾಕೆ…’ ಹಾಡಿನಲ್ಲಿ ನಟಿಸಿದ್ದರು.ಇದು ಪ್ರಕಾಶ್ ಬಾಲ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು. ಇದಾದ ನಂತರ ಮತ್ತೆ 1995ರಲ್ಲಿ ‘ಪುಟ್ಮಲ್ಲಿ’ ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಾಯಿಕುಮಾರ್ ಹಾಗೂ ಮಾಲಾಶ್ರೀ ನಟನೆಯ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲವಾದರೂ ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದರು ಪ್ರಕಾಶ್.
ಶಸ್ತ್ರ ಚಿಕಿತ್ಸೆ ನಂತರ ಸ್ಯಾಂಡಲ್ವುಡ್ನಲ್ಲಿ ಬುಲೆಟ್ ಪ್ರಕಾಶ್ ವಿರುದ್ಧ ಅಪಪ್ರಚಾರ
ದಪ್ಪಗಿದ್ದ ಕಾರಣಕ್ಕೆ ಆರೋಗ್ಯದಲ್ಲಿ ಏರುಪೇರಾಗತೊಡಗಿದ್ದ ಕಾರಣದಿಂದ ಪ್ರಕಾಶ್ ದೇಹದ ತೂಕ ಇಳಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಾದ ನಂತರ ಅಂದರೆ 2016ರಿಂದ ಬುಲೆಟ್ ಪ್ರಕಾಶ್ಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಯಿತು. ಅದಕ್ಕೂ ಕಾರಣ ಇದೆ.
ಶಸ್ತ್ರ ಚಿಕಿತ್ಸೆ ನಂತರ ಪ್ರಕಾಶ್ಗೆ ಅಭಿನಯಿಸೋಕೆ ಕಷ್ಟವಾಗುತ್ತಿದೆ. ಡೈಲಾಗ್ ನೆನಪಿಟ್ಟುಕೊಳ್ಳಲಾಗುತ್ತಿಲ್ಲ.. ಹೀಗೆಲ್ಲ ಕೆಲವರು ಅವರ ವಿರುದ್ಧ ಅಪಪ್ರಚಾರ ಮಾಡಿದ ಕಾರಣಕ್ಕೆ ಸಾಕಷ್ಟು ಅವಕಾಶಗಳು ಬುಲೆಟ್ ಅವರ ಕೈ ತಪ್ಪಿತ್ತು ಎಂದು ಅವರೇ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದರು.
2016 ರಿಂದ ಕನ್ನಡ ಚಿತ್ರರಂಗದಲ್ಲಿರುವವರೇ ನನ್ನನ್ನು ತುಳಿದರು. ಇದರಿಂದಾಗಿ ನಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಆದರೂ ಇದಕ್ಕಿಂತ ಕಷ್ಟಗಳನ್ನು ನೋಡಿರುವ ನಾನು ಮತ್ತೆ ಎದ್ದು ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.
ಅಂದುಕೊಂಡಂತೆ ಸಿನಿಮಾ ನಿರ್ಮಿಸಲು ಆಗಲೇ ಇಲ್ಲ..!
ತಮ್ಮ ಮಗ ರಕ್ಷಕ್ ಸೇನನ್ನು ಬಣ್ಣದ ಲೋಕಕ್ಕೆ ಪರಿಚಯಿಸುವ ಪ್ರಯತ್ನದಲ್ಲಿದ್ದ ಪ್ರಕಾಶ್ ಬಹಳ ಹಿಂದೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು. ಆದರೆ ಕಾರಣಾಂತರಗಳಿಂದ ಅದು ಅರ್ಧಕ್ಕೆ ನಿಂತಿತ್ತು.