Wednesday, June 24, 2026
Homeಕರಾವಳಿಮಹಾನಗರ ಪಾಲಿಕೆಯ 2026-27ನೆ ಸಾಲಿನ ಬಜೆಟ್ ತಯಾರಿಕೆ ಪ್ರಕ್ರಿಯೆ

ಮಹಾನಗರ ಪಾಲಿಕೆಯ 2026-27ನೆ ಸಾಲಿನ ಬಜೆಟ್ ತಯಾರಿಕೆ ಪ್ರಕ್ರಿಯೆ

- Advertisement -
- Advertisement -

ಮಂಗಳೂರು: ಮಹಾನಗರ ಪಾಲಿಕೆಯ 2026-27ನೆ ಸಾಲಿನ ಬಜೆಟ್ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಸುತ್ತಿನ ಸಾರ್ವಜನಿಕ ಸಭೆ ಸೋಮವಾರ ನಡೆಯಿತು.

ಸಭೆಗೆ ನೋಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಪಾಲಿಕೆಯಿಂದಾಗುತ್ತಿರುವ ತೆರಿಗೆ ಸೋರಿಕೆಯ ಜತೆಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಬಜೆಟ್ ಪೂರ್ವಭಾವಿ ಸಭೆ ಅಹವಾಲು ಸಭೆಯಾಗಿ ಮಾರ್ಪಟ್ಟಿತು.

ಸಾರ್ವಜನಿಕರು ಸೇರಿ ಕೇವಲ 12 ಮಂದಿ ಮಾತ್ರವೇ ಭಾಗವಹಿಸಿದ್ದರು. ನಿಕಟಪೂರ್ವ ಜನಪ್ರತಿನಿಧಿಗಳ ಕೊರತೆಯೂ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಲು ಭಾಗವಹಿಸಿದವರ ಸಂಖ್ಯೆ ಕಡಿಮೆಯಾಗಿದೆ. 2ನೆ ಸುತ್ತಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪಾಲಿಕೆಯ ಬಜೆಟ್‌ಗೆ ಸಂಬಂಧಿಸಿ ಸಲಹೆಗಳನ್ನು ನೀಡಬೇಕೆಂದು ಕರೆ ನೀಡಿದರು.

ನಗರದ ಹಲವು ಕಡೆ ಪಾರ್ಕ್, ಕೆರೆಗಳು ಮುಡಾದಿಂದ ಅಭಿವೃದ್ಧಿ ಆದರೂ ನಿರ್ವಹಣೆ ಆಗದೆ, ಜನರ ತೆರಿಗೆಯ ಕೋಟ್ಯಂತರ ರೂ. ಪೋಲಾಗುತ್ತಿದೆ ಎಂದು ಸಾರ್ವಜನಿಕರ ಪರವಾಗಿ ಜಿ.ಕೆ. ಭಟ್ ಅಸಮಾಧಾನ ವ್ಯಕ್ತಪಡಿಸಿದರು.ಮುಡಾ ಹಾಗೂ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಆದ ಕಾಮಗಾರಿಗಳ ನಿರ್ವಹಣೆ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ನಗರದ ವಿವಿಧ ಕಡೆಯ 28 ಕೆರೆಗಳು, 16 ಪಾರ್ಕ್‌ಗಳು ಅಭಿವೃದ್ದಿ ಮಾಡಲಾಗಿದೆ. ಅವುಗಳನ್ನು ಮನಪಾಕ್ಕೆ ಹಸ್ತಾಂತರ ಮಾಡುವ ಸಂದರ್ಭ ನಿರ್ವಹಣೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಗೆತ್ತಿಗೊಳ್ಳುವ ಸಂದರ್ಭದವಲ್ಲಿಯೇ ಟೆಂಡರ್ ವಹಿಸುವವರೇ ಮೂರಿಂದ ಐದು ವರ್ಷಗಳ ನಿರ್ವಹಣೆಗೆ ಷರತ್ತು ವಿಧಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಉತ್ತರಿಸಿದರು.

ಸಭೆಯಲ್ಲಿ ಎಸ್.ಎಲ್. ಪಿಂಟೋ, ರಾಜೇಂದ್ರ ಕುಮಾರ್, ರಾಧಾಕೃಷ್ಣ ಅವರು ಸಲಹೆ ನೀಡಿದರು.

ಪಾಲಿಕೆ ಕಂದಾಯ ಅಧಿಕಾರಿ ಅಕ್ಷತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!