ಬೆಳ್ತಂಗಡಿ: ಆರೋಗ್ಯ ರಕ್ಷಣೆಗೆ ಭಜನೆಯು ಅತಿ ಮುಖ್ಯ ಹಾದಿಯಾಗಿದ್ದು, ಆರೋಗ್ಯವಂತ ಶರೀರವೇ ಆತ್ಮದ ಅರಮನೆಯಾಗಿದೆ ಎಂದು ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನದ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಜನೆಯಿಂದ ಸಾಮಾಜಿಕ ಪರಿವರ್ತನೆ, ಕೌಟುಂಬಿಕ ಸಾಮರಸ್ಯ ಹಾಗೂ ಒಳ್ಳೆಯ ನಡತೆಗಳು ಸೃಷ್ಟಿಯಾಗಿ ಸಮಾಜದಲ್ಲಿನ ತೊಂದರೆಗಳು ದೂರವಾಗುತ್ತವೆ. ದುಶ್ಚಟಗಳನ್ನು ತ್ಯಜಿಸಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಭಜನೆ ಸಹಕಾರಿ ಎಂದು ಅವರು ತಿಳಿಸಿದರು.
ಅಲ್ಲದೆ, ಮಧ್ಯವರ್ಜನ ಶಿಬಿರ, ಭಜನಾ ಕಮ್ಮಟದಂತಹ ಯೋಜನೆಗಳ ಮೂಲಕ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳು ಸಾವಿರಾರು ಜನರಿಗೆ ದಾರಿದೀಪವಾಗಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ ಮಣಿಪಾಲದ ಸಂಗೀತ ವಿದೂಷಿ ಉಷಾ ಹೆಬ್ಬಾರ್ ಅವರು ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಭಜನಾ ಕಮ್ಮಟ ಪರಿಷತ್ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ, ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್, ಮುಖ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.


