ಬೆಳ್ತಂಗಡಿ: ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ಎ.ಪಿ.ಎಂ.ಸಿ ಯಾರ್ಡ್‍ಗೆ ಸ್ಥಳಾಂತರ ಗೊಂಡ ವಾರದ ಸಂತೆಯನ್ನು ಖಾಯಂ ಆಗಿ ಎ.ಪಿ.ಎಂ.ಸಿಯಲ್ಲೇ ಮುಂದುವರಿಸಲು ಜೂ.1ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಮೊದಲು ವಾರದ ಸಂತೆಯು ಸಂತೆಕಟ್ಟೆ ಪರಿಸರದಲ್ಲಿ ನಡೆಯುತ್ತಿತ್ತು. ಅಲ್ಲಿ ಜಾಗದ ಕೊರತೆ, ವ್ಯಾಪಾರಿಗಳಿಗೆ, ಜನರಿಗೆ ಹಾಗೂ ವಾಹನ ನಿಲುಗಡೆಗೆ ತೊಂದರೆ ಆಗುತ್ತಿತ್ತು. ನಂತರ ಕೊರೊನಾ ಸೋಂಕು ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಎರಡು ತಿಂಗಳ ಹಿಂದೆ ವಿಶಾಲವಾದ ಜಾಗವನ್ನು ಹೊಂದಿರುವ ಬೆಳ್ತಂಗಡಿ ಎಪಿಎಂಸಿ ಯಾರ್ಡ್‍ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಕಳೆದ ಎರಡು ತಿಂಗಳುಗಳಿಂದ ಇಲ್ಲಿ ವಾರದ ಸಂತೆ ನಡೆಯುತ್ತಿದೆ.
ಎಪಿಎಂಸಿ ಯಾರ್ಡ್ನಲ್ಲಿ ಇನ್ನು ಮುಂದೆ ವಾರದ ಸಂತೆ ಖಾಯಂ ಆಗಿ ನಡೆಯಲಿದೆ. ಎಪಿಎಂಸಿಗೆ ಶಿಫ್ಟ್ ಮಾಡುವ ಮೂಲಕ ಬೆಳ್ತಂಗಡಿ ಜನತೆಯ ಬಹುವರುಷದ ಕನಸನ್ನು ಶಾಸಕ ಹರೀಶ್ ಪೂಂಜಾ ನನಸು ಗೊಳಿಸಿದ್ದಾರೆ.
ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಉಪಾಧ್ಯಕ್ಷ ಅಬ್ದುಲ್ ಗಪೂರ್, ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ಕಾರ್ಯದರ್ಶಿ ರವೀಂದ್ರ, ಸದಸ್ಯರಾದ ಈಶ್ವರ ಭೈರ, ಅಶೋಕ್ ಗೋವಿಯಸ್, ಚಿದಾನಂದ ಎಲ್ಡಡ್ಕ, ಸುಂದರ ಗೌಡ, ಪುಷ್ಪರಾಜ ಹೆಗ್ಡೆ, ಜಯಾನಂದ ಕಲ್ಲಾಪು ಭಾಗವಹಿಸಿದ್ದರು.


