
ಬೆಳ್ತಂಗಡಿ: ಸಿಂಧೂರ ಶೆಟ್ಟಿ ಇವರು ಚಾರ್ಟ್ ಪೇಪರ್ ಮೇಲೆ ಕಪ್ಪು ಮಾರ್ಕರ್ ಪೆನ್ ಬಳಸಿ, ಸ್ಕ್ರಿಬಲ್ ಆರ್ಟ್ (ಅಸ್ತವ್ಯಸ್ತ ವೃತ್ತಾಕಾರದ ಮಾದರಿ) ತಂತ್ರದ ಮೂಲಕ ಚಾರ್ಲಿ ಚಾಪ್ಲಿನ್ ಅವರ ಕಪ್ಪು-ಬಿಳಿ ಸ್ಟೆನ್ಸಿಲ್ ಕಲಾಕೃತಿಯನ್ನು ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ (IBR Achiever) ಬಿರುದಿಗೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು ಅವರು 18 ವರ್ಷ 1 ತಿಂಗಳ ವಯಸ್ಸಿನಲ್ಲಿ ಸಾಧಿಸಿದ್ದು, 9-7-2026 ರಂದು ಈ ದಾಖಲೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ.
ನಡ ಗ್ರಾಮದ ಕೆಲ್ತಾಜೆ ಸಾಯಿ ಪ್ರಸಾದ ಮನೆ ನಿವಾಸಿ ಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಭಾರತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ನಡ ಸರಕಾರಿ ಶಾಲೆಯಲ್ಲಿ ಮತ್ತು ಪಿ.ಯು.ಸಿ ಯನ್ನು ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಪೂರೈಸಿದ್ದು, ಪ್ರಸ್ತುತ ಸಂತ ಫಿಲೋಮಿನ ಕಾಲೇಜು ಪುತ್ತೂರು ಇಲ್ಲಿ ಪ್ರಥಮ ವರ್ಷದ BCA AI & ML ವ್ಯಾಸಾಂಗ ಮಾಡುತ್ತಿದ್ದಾರೆ.
ಇವರು ಈ ಹಿಂದೆಯೂ 46 A4 ಶೀಟ್‌ಗಳನ್ನು ಬಳಸಿ ಸರೋಜಿನಿ ನಾಯ್ಡು ಅವರ ಟೈಪೋಗ್ರಾಫಿಕ್ ಆರ್ಟನ್ನು ಅವರ ಕವನಗಳನ್ನು ಬಳಸಿ ಮಾಡಿ ಗಮನ ಸೆಳೆದಿದ್ದರು. ಶಾಲಾ ದಿನಗಳಲ್ಲಿಯೂ ತನ್ನ ಅದ್ಬುತ ಪ್ರತಿಭೆಯ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಇನ್ನಷ್ಟು ಸಾಧನೆಗಳನ್ನು ಮಾಡುವ ಕನಸನ್ನು ಹೊಂದಿದ್ದಾರೆ.


