ಬೆಳ್ತಂಗಡಿ: ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡು 2001ರಲ್ಲಿ ವಾರಂಟ್ ಜಾರಿಯಾಗಿದ್ದ, ಧರ್ಮಸ್ಥಳ ಗ್ರಾಮದ ವಿದ್ಯುಷಿ ನಗರದ ಬಾಲಕೃಷ್ಣ ರಾವ್ 2007 ರಲ್ಲಿ ಮೃತಪಟ್ಟಿರುವುದಾಗಿ ಅವರ ಮರಣ ಪ್ರಮಾಣ ಪತ್ರದ ಪ್ರತಿಯನ್ನು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಡಿ.15 ರಂದು ಹಾಜರುಪಡಿಸಿದ್ದಾರೆ.
ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮದ ವಿದ್ಯುಷಿ ನಗರ ನಿವಾಸಿ ದಿ.ಗಣಪತಿ ರಾವ್ ಮಗ ಬಾಲಕೃಷ್ಣ ರಾವ್ ಎಂಬವರಿಗೆ 2001 ಫೆಬ್ರವರಿಯಲ್ಲಿ ಎಲ್.ಪಿ.ಸಿ ವಾರಂಟ್ ಹೊರಡಿಸಲಾಗಿತ್ತು. ಅವರ ಪತ್ತೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರಾದ ರೋಹಿಣಿ.ಸಿ.ಕೆ, ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ ಎಸ್, ಉಪ ನೀರಿಕ್ಷಕರಾದ ಸಮರ್ಥ್ ಆರ್ ಗಾಣಿಗೇರ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ವೃಷಭ, ಚರಣ್‌ರಾಜ್, ರವರು ಉಡುಪಿ, ಪುತ್ತೂರು, ಚಿಕ್ಕಮಗಳೂರು ಅಂಚೆ ಉಪ ವಿಭಾಗಗಳಿಗೆ ಭೇಟಿ ನೀಡಿ ಅವರ ಬಗ್ಗೆ ವಿಚಾರಿಸಿದಾಗ 1997 ರಲ್ಲಿ ಚಿಕ್ಕಮಗಳೂರು ಅಂಚೆ ವಿಭಾಗದಿಂದ ಕಡ್ಡಾಯ ನಿವೃತ್ತಿ ನೀಡಿದ್ದು, 2007 ಫೆ.12 ರಲ್ಲಿ ಮೃತ ಪಟ್ಟಿರುವುದಾಗಿ ತಿಳಿದುಬಂದಿತ್ತು. ಅದರಂತೆ ಅವರ ಮರಣ ಪ್ರಮಾಣ ಪತ್ರದ ಪ್ರತಿಯನ್ನು ಪಡೆದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


