ಬೆಳ್ತಂಗಡಿ: ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿ ಎಂಬವರ ಜಮೀನಿನಲ್ಲಿ ಭಾರಿ ಬೆಲೆ ಬಾಳುವ ನಿಧಿ ಸಿಕ್ಕಿದೆ ಎನ್ನುವ ವಿಡಿಯೋ ಒಂದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

ನಿಧಿ ಪತ್ತೆಯಾದ ಶಂಕೆ ಇರುವ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್, ಬೆಳ್ತಂಗಡಿ ಎಸ್.ಐ. ನಂದಕುಮಾರ್, ನಡ ಗ್ರಾ.ಪಂ. ಗ್ರಾಮ ಲೆಕ್ಕಿಗ ಅಧಿಕಾರಿಗಳು ಭೇಟಿ ನೀಡಿ, ಹಿಟಾಚಿ ಯಂತ್ರದ ಮೂಲಕ ನಿಧಿ ಶೋಧಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸ್ಥಳಕ್ಕೆ ನೂರಾರು ಗ್ರಾಮಸ್ಥರು ದೌಡಾಯಿಸಿದ್ದಾರೆ.

ಘಟನೆಯ ವಿವರ:
ಒಂದು ತಿಂಗಳ ಹಿಂದೆ ಆನಂದ ಶೆಟ್ಟಿ ಅವರಿಗೆ ನಿಧಿ ಲಭಿಸಿತ್ತು ಇದೀಗ ಅವರು ನಿಧಿ ಸಿಕ್ಕಿದ ಜಾಗವನ್ನು ಸಮತಟ್ಟು ಮಾಡಿದ್ದಾರೆ ಎಂದು ಯಾರೋ ಸ್ಥಳೀಯರು ವಿಡಿಯೋ ಮಾಡಿ ಎಸಿ ಯವರಿಗೆ ಕಳುಹಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ತಹಶೀಲ್ದಾರ್, ಬೆಳ್ತಂಗಡಿ ಎಸ್.ಐ ಇಂದು ಸ್ಥಳಕ್ಕೆ ಆಗಮಿಸಿ ಕಾರ್ಯಚರಣೆ ನಡೆಸಿದರು. ಆದರೆ ಜಮೀನಿನ ಮಾಲೀಕರು ಹೇಳುವಂತೆ ಸ್ಥಳದಲ್ಲಿ ತಾಳೆಮರವಿದ್ದು, ಅದನ್ನು ತೆರವುಗೊಳಿಸುವಾಗ ಮಣ್ಣು ಕುಸಿತಗೊಂಡಿದ್ದು ಯಾವುದೇ ನಿಧಿ ಇಲ್ಲ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಾಚರಣೆ ಸ್ಥಗಿತ:
ನಿಧಿ ಇದೆ ಎನ್ನುವುದು ಕೇವಲ ಗುಮಾನಿ ಎಂದಿರುವ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ, ನಿಧಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಿದ್ದಾರೆ.


