ಬೆಳ್ತಂಗಡಿ: ಕೋವಿಡ್ 19 ಲಾಕ್ ಡೌನ್ ಹಿನ್ನೆಲಿಯಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಎ.26 ರಂದು ಆಚರಿಸಲಾಯಿತು.
ತಹಸೀಲ್ದಾರ್ ಗಣಪತಿ ಶಾಸ್ತ್ರೀ ಅವರು, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, 12 ನೇ ಶತಮಾನದಲ್ಲಿ ಕ್ರಾಂತಿಕಾರಿ ಹಾಗೂ ಸಾಮಾಜಿಕ ಚಳುವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿರ್ಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು, ತಮ್ಮ ವಚನಗಳ ಮೂಲಕ ಕಾಯಕ ಮತ್ತು ಸಮಾನತೆಯ ಮಹತ್ವವನ್ನು ಸಾರಿದರು ಎಂದು ಹೇಳಿದರು .
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕೆ.ಇ.ಜಯರಾಮ್, ಉಪ ತಹಸೀಲ್ದಾರ್ ಸಿದ್ದೇ ಗೌಡ, ಕೊಕ್ಕಡ ಕಂದಾಯ ನಿರೀಕ್ಷಕ
ಪವಾಡಪ್ಪ ದೊಡ್ಡಮನಿ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮಕರಣಿಕರುಗಳ ಉಪಸ್ಥಿತರಿದ್ದರು.