ಮಂಗಳೂರು:ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಜೀರ್ ಗ್ರಾಮದ ಮೆಹತಾಬ್(21) ಹಾಗೂ ಬಿಲಾಲ್(18) ಎಂಬ ಯುವಕರು ಐತಿಹಾಸಿಕ ಸ್ಥಳಗಳ ಅಧ್ಯಯನ ಮಾಡುವ ಉದ್ದೇಶದಿಂದ ಸೋಮವಾರ ಕಾಲ್ನಡಿಗೆಯ ಮೂಲಕ ಕರ್ನಾಟಕದಿಂದ ಕಾಶ್ಮೀರಕ್ಕೆ ಹೊರಟಿದ್ದಾರೆ.
ಬಿಲಾಲ್ ಈ ಬಾರಿ ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಿದ್ದು, ಶಿಕ್ಷಣ ಮುಂದುವರಿಸುವ ಇಚ್ಛೆಯನ್ನು ಹೊಂದಿದ್ದಾನೆ. ಇನ್ನು ಮೆಹತಾಬ್ ಪ್ರಥಮ ಪಿಯುಸಿ ವರೆಗೆ ಕಲಿತಿದ್ದು, ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸಕ್ಕಿದರು . ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿದ್ದ ವೇಳೆ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದ ಇಬ್ಬರು ಜೊತೆಗೂಡಿ ಪಾದಯಾತ್ರೆ ಮಾಡುವ ಬಗ್ಗೆ 4 ತಿಂಗಳ ಹಿಂದೆ ಯೋಜನೆ ಹಾಕಿಕೊಂಡಿದ್ದರು.
ಮಾರ್ಗದಲ್ಲಿನ ಮಸೀದಿ, ಚರ್ಚ್ ಹಾಗೂ ಮಂದಿರಗಳ ಬಗ್ಗೆ ಮಾಹಿತಿಯನ್ನು ಯೂಟ್ಯೂಬ್ ಮೂಲಕ ಅಪ್‌ಲೋಡ್ ಮಾಡುವ ಯೋಜನೆ ಹೊಂದಿದ್ದು, 90 ದಿನಗಳ ಪಾದಯಾತ್ರೆಯಲ್ಲಿ 2,500 ಕಿ.ಮೀ. ದೂರ ಸಾಗುವ ಗುರಿಯನ್ನು ಹೊಂದಿದ್ದೇವೆ ಎಂದು ಮೆಹತಾಬ್ ಹೇಳಿದ್ದಾರೆ.
ದಿನದಲ್ಲಿ 50ರಿಂದ 70 ಕಿ.ಮೀ. ಕ್ರಮಿಸುವ ಗುರಿ ಹೊಂದಿದ್ದು, ರಾತ್ರಿ ವೇಳೆ ಪೆಟ್ರೋಲ್ ಬಂಕ್ ಇಲ್ಲವೇ ಇತರೆಡೆ ಟೆಂಟ್‌ಹೌಸ್ ನಿರ್ಮಿಸಿ ವಿಶ್ರಾಂತಿ ಪಡೆದು, ಬೆಳಿಗ್ಗೆ ಮತ್ತೆ ಎದ್ದು ಯಾತ್ರೆ ಮುಂದುವರೆಸುತ್ತೇವೆ ಎಂದಿದ್ದಾರೆ.
ಸುಮಾರು ₹35 ಸಾವಿರ ವೆಚ್ಚದಲ್ಲಿ ಪಾದಯಾತ್ರೆ ಪೂರ್ಣಗೊಳಿಸುವ ಯೋಜನೆ ಇದ್ದು,ದಿನದಲ್ಲಿ ₹350 ರಂತೆ ಖರ್ಚು ಮಾಡುವ ಲೆಕ್ಕವನ್ನು ಹೊಂದಿದ್ದಾರೆ. ದುಡಿಮೆಯಿಂದ ಗಳಿಸಿದ ಹಣವಲ್ಲದೆ ಹೆಚ್ಚಿನ ಹಣವನ್ನು ಗೆಳೆಯರು ಭರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.


