Monday, June 8, 2026
Homeಕರಾವಳಿಉಡುಪಿಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕ; ಕಾನೂನಿನಲ್ಲಿ ಅವಕಾಶ ಎಲ್ಲಿದೆ ಎಂದು ಹೈಕೋರ್ಟ್ ಪ್ರಶ್ನೆ

ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕ; ಕಾನೂನಿನಲ್ಲಿ ಅವಕಾಶ ಎಲ್ಲಿದೆ ಎಂದು ಹೈಕೋರ್ಟ್ ಪ್ರಶ್ನೆ

- Advertisement -
- Advertisement -

ಬೆಂಗಳೂರು: ಉಡುಪಿಯ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿಯನ್ನು ನೇಮಕ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಅಪ್ರಾಪ್ತರ ಸಮ್ಮತಿಗೆ ಕಾನೂನಿನಲ್ಲಿ ಅವಕಾಶ ಎಲ್ಲಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕವಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು, ಈ ವೇಳೆ ಮುಖ್ಯ ನ್ಯಾ. ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ.ಎನ್.ಎಸ್.ಸಂಜಯ್ ಗೌಡ ಅವರ ಪೀಠ ಅಪ್ರಾಪ್ತರ ಸಮ್ಮತಿಗೆ ಕಾನೂನಿನಲ್ಲಿ‌ ಅವಕಾಶ ಎಲ್ಲಿದೆ? ಮಗನ ಸನ್ಯಾಸಕ್ಕೆ ಪೋಷಕರು ಒಪ್ಪಿಗೆ ನೀಡಲು ಸಾಧ್ಯವೇ? ಎಂದು‌ ಪ್ರಶ್ನೆ ಹಾಕಿತ್ತು. ಈ ಅಂಶಕ್ಕೆ ಸಂಬಂಧಿಸಿದ ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸಬೇಕಿದ್ದು, ಸೆಪ್ಟೆಂಬರ್ 13 ರೊಳಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಪೀಠ ಸೂಚನೆ ನೀಡಿದೆ.

ಅಪ್ರಾಪ್ತ ಬಾಲಕನಿಗೆ ತಾನು ಕೈಗೊಳ್ಳುವ ಕೆಲಸ ಉಂಟುಮಾಡಬಹುದಾದ ಪರಿಣಾಮದ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ, ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯಾಗಿ ನೇಮಿಸಿರುವ ಸಂಬಂಧದ ತನ್ನ ನಿಲುವನ್ನು ರಾಜ್ಯ ಸರ್ಕಾರವು ಪುನರ್‌ ಪರಿಶೀಲಿಸಬೇಕು ಎಂದು ಹೇಳಿದೆ.

ಶಿರೂರು ಮಠಕ್ಕೆ ಬಾಲ ವಟುವನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲಾತವ್ಯ ಆಚಾರ್ಯ ಹಾಗೂ ಇತರ 4 ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಬಾಲಕನನ್ನು ನೇಮಿಸಲಾಗಿದೆ. ಈ ರೀತಿ ಅಪ್ರಾಪ್ತರನ್ನು ನೇಮಿಸುವುದು ಕಾನೂನು ಬಾಹಿರ. ಶಿರೂರು ಮಠದ ಆಡಳಿತಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸೋದೆ ಮಠಕ್ಕೆ ಯಾವುದೇ ಅಧಿಕಾರವಿಲ್ಲ. ಹೀಗಿದ್ದೂ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗಳು ಬಾಲಕನನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮ ಹೀಗಾಗಿ, ಶಿರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಲು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಅಧಿಕಾರವಿಲ್ಲ ಎಂದು ಘೋಷಿಸಬೇಕು. ಜತೆಗೆ ಅಪ್ರಾಪ್ತರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮವೆಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

- Advertisement -

Latest News

error: Content is protected !!