
ಬೆಂಗಳೂರು; ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಪಮಾ ಗೌಡ, ತಮ್ಮ ಎಂಟು ವರ್ಷಗಳ ನಿರೂಪಣಾ ಪಯಣಕ್ಕೆ ದಿಢೀರ್ ವಿದಾಯ ಹೇಳಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
2018ರಲ್ಲಿ ‘ಸೀರಿಯಲ್ ಸಂತೆ’ ಮೂಲಕ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದ್ದ ಅನುಪಮಾ, ‘ರಾಜ ರಾಣಿ’, ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಅನುಬಂಧ ಅವಾರ್ಡ್ಸ್’ ನಂತಹ ಸೂಪರ್ ಹಿಟ್ ಶೋಗಳ ಮೂಲಕ ಕೋಟ್ಯಂತರ ಕನ್ನಡಿಗರ ನೆಚ್ಚಿನ ನಿರೂಪಕಿಯಾಗಿದ್ದರು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾವುಕ ವಿಡಿಯೋ ಹಂಚಿಕೊಂಡಿರುವ ಅವರು, “ಪ್ರತಿ ಶನಿವಾರ-ಭಾನುವಾರ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ ನಾನು, ಇವತ್ತು ಮೈಕ್ ಕೆಳಗಿಡುವ ಸಮಯ ಬಂದಿದೆ,” ಎಂದು ಕಣ್ಣೀರಾಗಿದ್ದಾರೆ. ತಮ್ಮ ಈ ಬೆಳವಣಿಗೆಗೆ ಮತ್ತು ಆರ್ಥಿಕ ಸಬಲತೆಗೆ ನಿರೂಪಣೆಯೇ ಕಾರಣವೆಂದು ಹೇಳಿದ ಅನುಪಮಾ, ತಮ್ಮೊಳಗಿನ ನಟಿಯನ್ನು, ಕಲಾವಿದೆಯನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಠಿಣ ನಿರ್ಧಾರ ತಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಎಂಟು ವರ್ಷಗಳ ಕಾಲ ಅಪಾರ ಪ್ರೀತಿ ನೀಡಿದ ವೀಕ್ಷಕರಿಗೆ ಕೃತಜ್ಞತೆ ಸಲ್ಲಿಸಿರುವ ಅನುಪಮಾ ಗೌಡ, ಶೀಘ್ರದಲ್ಲೇ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುವುದಾಗಿ ಹೇಳಿ ವಿದಾಯ ಹೇಳಿದ್ದಾರೆ!


